Connect with us

Districts

ಏಸು ಕ್ರಿಸ್ತ ಪ್ರತಿಮೆ ವಿವಾದ- ಸರ್ಕಾರಕ್ಕೆ ವರದಿ ನೀಡೋ ಮುನ್ನವೇ ತಹಶೀಲ್ದಾರ್ ಎತ್ತಂಗಡಿ

Published

on

– ವರ್ಷಾಂತ್ಯದಲ್ಲಿ ಡಿಕೆಶಿಗೆ ಶಾಕ್

ರಾಮನಗರ: ಏಸು ಪ್ರತಿಮೆ ನಿರ್ಮಾಣ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದು, ಸರ್ಕಾರಕ್ಕೆ ವರದಿ ನೀಡುವ ಮುನ್ನವೇ ಕನಕಪುರ ತಹಶೀಲ್ದಾರ್ ಆನಂದಯ್ಯ ಅವರನ್ನು ಸ್ಥಳ ನಿಯೋಜನೆ ಮಾಡದೇ ಏಕಾಏಕಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಹಶೀಲ್ದಾರ್ ಆಗಿದ್ದ ವರ್ಷ ಅವರನ್ನು ಕನಕಪುರ ತಹಶೀಲ್ದಾರ್ ಆಗಿ ನೇಮಕ ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆರ್.ಉಮಾದೇವಿ ಸೋಮವಾರ ರಾತ್ರಿ ಆದೇಶ ಹೊರಡಿದ್ದಾರೆ.

ಕನಕಪುರ ತಾಲೂಕಿನ ಹಾರೊಬೆಲೆ ಸಮೀಪದಲ್ಲಿನ ಕಪಾಲ ಬೆಟ್ಟದಲ್ಲಿನ 10 ಎಕರೆ ಸರ್ಕಾರಿ ಗೋಮಾಳದಲ್ಲಿ ಶಾಸಕ ಡಿ.ಕೆ ಶಿವಕುಮಾರ್ ಅವರು ಅತೀ ಎತ್ತರದ ಏಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಡಿ.25 ರಂದು ಚಾಲನೆ ನೀಡಿದ್ದರು. ಇದಾದ ಬಳಿಕ ಡಿಕೆಶಿ ನಡೆ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಈ ಬಗ್ಗೆ ಕಂದಾಯ ಸಚಿವರು ತನಿಖೆಗೆ ಆದೇಶಿಸಿ, ವರದಿ ನೀಡುವಂತೆ ರಾಮನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

ತನಿಖೆಗೆ ಆದೇಶ ಮಾಡಿದ ಮೂರೇ ದಿನದಲ್ಲಿ ಕನಕಪುರ ತಹಶೀಲ್ದಾರ್ ವರ್ಗಾವಣೆಯಾಗಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದೆಡೆ ಕಂದಾಯ ಇಲಾಖೆಗೆ ಸೇರಿದ ಭೂಮಿಯಲ್ಲಿಯೇ ಏಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದ್ದರಿಂದ ಸಹಜವಾಗಿ ಅಲ್ಲಿನ ತಹಶೀಲ್ದಾರ್ ಅವರೇ ಜಿಲ್ಲಾಧಿಕಾರಿಗಳಿಗೆ ಪ್ರಾಥಮಿಕ ವರದಿ ಸಲ್ಲಿಸಬೇಕಿತ್ತು. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೇ, ಕನಕಪುರ ತಹಶೀಲ್ದಾರ್ ವರ್ಗಾವಣೆಯಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: “ಏಸು ಪ್ರತಿಮೆ ನಿರ್ಮಾಣಕ್ಕೆ ವಿರೋಧಿಸಲ್ಲ, ಕೃಷ್ಣನೂ ಒಂದೇ, ಏಸುವೂ ಒಂದೇ, ಆದರೆ..”

ತಹಶೀಲ್ದಾರ್ ಆನಂದಯ್ಯ ವರ್ಗಾವಣೆಯಲ್ಲಿ ಸಾಕಷ್ಟು ಅನುಮಾನಗಳು ಮೂಡಿದ್ದು, ಡಿಕೆಶಿ ಆಪ್ತರು ಎಂಬ ಕಾರಣಕ್ಕೆ ಹಲವಾರು ವರ್ಷಗಳಿಂದ ಕನಕಪುರದಲ್ಲೇ ಆನಂದಯ್ಯ ಕೆಲಸ ಮಾಡುತ್ತಿದ್ದಾರೆ. ಡಿಕೆಶಿ ಅಣತಿಯಂತೆ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ಹೀಗಾಗಿ ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ ಎನ್ನಲಾಗಿದೆ. ಮತ್ತೊಂದು ಕಡೆ ಡಿಕೆಶಿ ಅವರ ಒತ್ತಡ ಹಾಗು ಪ್ರಭಾವದಿಂದಾಗಿ ತಹಶೀಲ್ದಾರ್ ವರ್ಗಾವಣೆ ಮೂಲಕ ಗೋಮಾಳದ ವರದಿಯನ್ನು ಇನ್ನಷ್ಟು ದಿನ ಮೂಂದೂಡುವ ತಂತ್ರವೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ಏಸು ಪ್ರತಿಮೆಗೆ ಜಮೀನು- ಡಿಕೆಶಿ ಸಮರ್ಥನೆ, ಬಿಜೆಪಿ ಕಟು ಟೀಕೆ

ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಕೆಲ ದಿನಗಳ ಹಿಂದಯಷ್ಟೇ ಜಿಲ್ಲೆಯಲ್ಲಿ ಕ್ಲೀನಿಂಗ್ ಕೆಲಸ ಆರಂಭಿಸಲಾಗುವುದು ಎಂದಿದ್ದರು. ಹಾಗಾಗಿ ತಹಶೀಲ್ದಾರ್ ಆನಂದಯ್ಯ ವರ್ಗಾವಣೆ ಆಗಿದ್ದಾರೆ ಎನ್ನಲಾಗಿದೆ. ಆದರೆ, ಕನಕಪುರ ತಾಲೂಕಿನ ಏಸು ಪ್ರತಿಮೆ ವಿವಾದದ ಬೆನ್ನಲ್ಲೇ ಅಲ್ಲಿನ ತಹಶೀಲ್ದಾರ್ ವರ್ಗಾವಣೆಯಾಗಿರುವುದು ಮಾತ್ರ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Click to comment

Leave a Reply

Your email address will not be published. Required fields are marked *