– ದೊಡ್ಡಗುಟ್ಟಕ್ಕೆ ಮಹಿಮಾ ಬೆಟ್ಟವೆಂದು ನಾಮಕರಣ
ಚಿಕ್ಕಬಳ್ಳಾಪುರ: ರಾಮನಗರದಲ್ಲಿನ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಗುಟ್ಟ ಬೆಟ್ಟದಲ್ಲೂ ಏಸು ಪ್ರತಿಮೆ ನಿರ್ಮಾಣವಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ದೊಡ್ಡಸಾಗರಹಳ್ಳಿ ಗ್ರಾಮದ ಬಳಿ ಇರುವ ದೊಡ್ಡಗುಟ್ಟ ಬೆಟ್ಟ ಕಪಾಲ ಬೆಟ್ಟದಂತೆ ವಿವಾದಕ್ಕೆ ಕಾರಣವಾಗುತ್ತಿದೆ. 180 ಮನೆಗಳಿರುವ ಪುಟ್ಟ ಗ್ರಾಮ ದೊಡ್ಡಸಾಗರಹಳ್ಳಿಗೆ ಹೊಂದಿಕೊಂಡಿರುವ ದೊಡ್ಡಗುಟ್ಟ ಬೆಟ್ಟದಲ್ಲಿ ಅಕ್ರಮವಾಗಿ ಏಸು ಪ್ರತಿಮೆ ಹಾಗೂ ಶಿಲುಬೆಗಳನ್ನ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದು ಹಿಂದೂ ಪರ ಸಂಘಟನೆಗಳ ಕಂಗಣ್ಣಿಗೆ ಕಾರಣವಾಗಿದ್ದು, ಹಿಂದೂ ಪರ ಸಂಘಟನೆಯೊಂದು ದೇವನಹಳ್ಳಿ ತಹಶೀಲ್ದಾರ್ ಗೆ ದೂರು ನೀಡಿದ್ದಾರೆ.
Advertisement
Advertisement
ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಏಸು ಪ್ರತಿಮೆ ಹಾಗೂ ಶಿಲುಬೆಗಳನ್ನ ನಿರ್ಮಾಣ ಮಾಡಿರುವುದಲ್ಲದೇ ಗ್ರಾಮಸ್ಥರನ್ನ ಮತಾಂತರ ಮಾಡಿರುವುದಾಗಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ದೊಡ್ಡಗುಟ್ಟ ಬೆಟ್ಟಕ್ಕೆ ಮಹಿಮಾ ಬೆಟ್ಟ ಅಂತ ಹೆಸರು ಬದಲಿಸಲಾಗಿದೆ. ಈ ಹಿಂದೆ ಈ ಬೆಟ್ಟದಲ್ಲಿ ಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ವಿನಾಯಕನ ದೇವಾಲಯಗಳಿತ್ತು, ಸದ್ಯ ಅವುಗಳ ಕುರುಹುಗಳು ಸಿಗದ ಹಾಗೆ ನಾಶಪಡಿಸಿ ಏಸುಪ್ರತಿಮೆ ನಿರ್ಮಾಣ ಮಾಡಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
Advertisement
Advertisement
ಈ ಏಸು ಪ್ರತಿಮೆ, ಶಿಲುಬೆಗಳಿಂದ ದೊಡ್ಡಗುಟ್ಟ ಬೆಟ್ಟ ಕಪಾಲ ಬೆಟ್ಟದಂತೆ ವಿವಾದಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ದೊಡ್ಡಬಳ್ಳಾಪುರ ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಹಿಂದೂ ಪರ ಸಂಘಟನೆಗಳ ಮುಖಂಡರು, ದೊಡ್ಡ ಸಾಗರ ಗ್ರಾಮದ ಸರ್ವೆ ನಂಬರ್ 158ರಲ್ಲಿ ಸರ್ಕಾರಿ ಜಾಗದ ಗುಡ್ಡದಲ್ಲಿ ಶಿಲುಬೆ ಹಾಕಿ ಏಸು ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಸರ್ಕಾರಿ ಜಾಗದ ಗುಡ್ಡಗಳಲ್ಲಿ ಕರ್ನಾಟಕದಲ್ಲಿ ಏಸು ಶಿಲುಬೆ ಹಾಗೂ ಏಸು ಪ್ರತಿಮಗಳನ್ನ ನಿರ್ಮಾಣ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಕೇವಲ ಶಿಲುಬೆ, ಪ್ರತಿಮೆ ನಿರ್ಮಾಣ ಮಾಡುವುದಲ್ಲದೇ ಸುತ್ತಮುತ್ತಲ ಗ್ರಾಮಸ್ಥರನ್ನ ಮತಾಂತರ ಮಾಡುವ ಮೂಲಕ ಸರ್ಕಾರಿ ಜಾಗಗಳನ್ನ ಕಬಳಿಸುವ ಹುನ್ನಾರ ನಡೆಸಲಾಗ್ತಿದೆ. ಇಂತಹ ಕೆಲಸಗಳಿಂದ ಕೋಮು ಸೌಹಾರ್ದ ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಏಸು ಪ್ರತಿಮೆ ನಿರ್ಮಾಣ ಮಾಡಿರುವವರ ಸ್ವಯಂಪ್ರೇರಣೆಯಿಂದ ಪ್ರತಿಮೆ ಹಾಗೂ ಶಿಲುಬೆಯನ್ನ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ದೊಡ್ಡಗುಟ್ಟ ಬೆಟ್ಟದ ಮೇಲಿನ ಏಸು ಪ್ರತಿಮೆ ಹಾಗೂ ಶಿಲುಬೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ತಹಶೀಲ್ದಾರ್ ಅಜಿತ್ ರೈ ಗ್ರಾಮಕ್ಕೆ ಹೋಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂದ ಪಬ್ಲಿಕ್ ಟಿವಿಗೆ ಫೋನ್ ಮೂಲಕ ಪ್ರತಿಕ್ರಿಯಿಸಿದ ತಹಶೀಲ್ದಾರ್, ಸರಿ ಸುಮಾರು 40 ಎಕ್ರೆ ಬೆಟ್ಟದ ಪ್ರದೇಶವಿದ್ದು, ಇದು ಸರ್ಕಾರಿ ಜಾಗವಾಗಿದೆ. ಗ್ರಾಮಸ್ಥರು ಸ್ಮಶಾನಕ್ಕೆ ಈ ಜಾಗದಲ್ಲಿ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲಿ ಯಾರಿಗೂ ಏಸು ಪ್ರತಿಮೆ ನಿರ್ಮಾಣ ಮಾಡಲು ಜಾಗ ಕೊಟ್ಟಿಲ್ಲ. ಹೀಗಾಗಿ ಗುರುವಾರ ಗ್ರಾಮಸ್ಥರ ಜೊತೆ ಸಭೆ ನಡೆಸಿ, ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.