– ಜನ ಸುರಾಜ್ ಪಕ್ಷದ ಬೆಂಬಲಿಗನ ಹತ್ಯೆ ಪ್ರಕರಣ
ಪಾಟ್ನಾ: ಕೆಲವೇ ದಿನಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ನಿತೀಶ್ ಕುಮಾರ್ ಅವರ ಪಕ್ಷದಿಂದ ಕಣಕ್ಕಿಳಿದಿರುವ ಮಾಜಿ ಶಾಸಕ ಅನಂತ್ ಸಿಂಗ್ ಕೊಲೆ ಪ್ರಕರಣವೊಂದರಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.
ಜನ ಸುರಾಜ್ ಬೆಂಬಲಿಗ ದುಲಾರ್ ಚಂದ್ ಯಾದವ್ ಕೊಲೆ ಪ್ರಕರಣದಲ್ಲಿ ಜೆಡಿ(ಯು)ನಿಂದ ಸ್ಪರ್ಧಿಸಿರುವ ಮಾಜಿ ಶಾಸಕನನ್ನು ಇಂದು ಮುಂಜಾನೆ ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಜೊತೆ ಸಂಬಂಧ ಹೊಂದಿದ್ದ ಗ್ಯಾಂಗ್‌ಸ್ಟರ್ ಯಾದವ್, ಗುರುವಾರ ಮೊಕಾಮಾದಲ್ಲಿ ತಮ್ಮ ಸೋದರಳಿಯ ಪ್ರಿಯದರ್ಶಿ ಪಿಯೂಷ್ ಪರ ಪ್ರಚಾರ ನಡೆಸುತ್ತಿದ್ದಾಗ ಹತ್ಯೆಗೀಡಾಗಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷದಿಂದ ಪಿಯೂಷ್ ಸ್ಪರ್ಧಿಸುತ್ತಿದ್ದಾರೆ. ಇದನ್ನೂ ಓದಿ: ಎನ್‌ಡಿಎಗೆ 160 ಸ್ಥಾನ ಖಚಿತ, ಬಿಹಾರದಲ್ಲಿ ಸರ್ಕಾರ ರಚಿಸೋದು ನಿಶ್ಚಿತ: ಅಮಿತ್ ಶಾ
ಮೊಕಾಮಾದ ಜೆಡಿ(ಯು) ಅಭ್ಯರ್ಥಿ ಮತ್ತು ಹಾಲಿ ಶಾಸಕಿ ನೀಲಂ ದೇವಿ ಅವರ ಪತಿ ಸಿಂಗ್ ಅವರನ್ನು ಬರ್ಹ್‌ನಲ್ಲಿರುವ ಅವರ ನಿವಾಸದಿಂದ ಬಂಧಿಸಲಾಯಿತು. ಜೊತೆಗೆ ಘಟನೆ ನಡೆದಾಗ ಅಲ್ಲಿಯೇ ಇದ್ದ ಮಣಿಕಾಂತ್ ಠಾಕೂರ್ ಮತ್ತು ರಂಜೀತ್ ರಾಮ್ ಎಂಬ ಇಬ್ಬರನ್ನು ಸಹ ಬಂಧಿಸಲಾಯಿತು.
ದುಲಾರ್ ಚಂದ್ ಯಾದವ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಅನಂತ್ ಸಿಂಗ್, ಮಣಿಕಾಂತ್ ಠಾಕೂರ್ ಮತ್ತು ರಂಜೀತ್ ರಾಮ್ ಎಂಬ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ಪಾಟ್ನಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕಾರ್ತಿಕೇಯ ಶರ್ಮಾ ಅವರು ತಡರಾತ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಮುಖ್ಯಮಂತ್ರಿಯಾಗಿ ಯಾರ ಹೆಸರನ್ನೂ ನಾನು ಪ್ರಶಸ್ತಿಗೆ ಶಿಫಾರಸು ಮಾಡಿಲ್ಲ: ಸಿದ್ದರಾಮಯ್ಯ
2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅನಂತ್ ಸಿಂಗ್ ಅವರು ಆರ್‌ಜೆಡಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಆದರೆ, ನಂತರ 2022 ರಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಶಿಕ್ಷೆಗೊಳಗಾದ ನಂತರ ಅನರ್ಹಗೊಳಿಸಲಾಯಿತು. ನಂತರ ಅವರ ಪತ್ನಿ ನೀಲಂ ದೇವಿ ಉಪಚುನಾವಣೆಯಲ್ಲಿ ಗೆದ್ದರು.
ಮೊಕಾಮಾದಲ್ಲಿ ಯಾದವ್ ಹತ್ಯೆಯ ನಂತರ ಚುನಾವಣಾ ಆಯೋಗವು ಶನಿವಾರ ಪಾಟ್ನಾ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ವಿಕ್ರಮ್ ಸಿಹಾಗ್ ಅವರನ್ನು ವರ್ಗಾವಣೆ ಮಾಡಿದೆ. ಬಿಹಾರದಲ್ಲಿ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.


