ಪಾಟ್ನಾ: ಬಿಹಾರದಲ್ಲಿರುವ ಆಡಳಿತಾರೂಢ ಜೆಡಿಯು – ಬಿಜೆಪಿ ಸರ್ಕಾರದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಬಿರುಕು ದೊಡ್ಡದಾಗುವ ಲಕ್ಷಣಗಳು ಕಂಡು ಬರುತ್ತಿದ್ದು ಮೈತ್ರಿ ಸರ್ಕಾರ ಪತನವಾಗುವ ಸಾಧ್ಯತೆಗಳು ದಟ್ಟವಾಗಿವೆ. ಉಭಯ ಪಕ್ಷದ ನಾಯಕರ ನಡುವೆ ಭಿನ್ನಮತದ ಬೆನ್ನಲ್ಲೇ ಪಾಟ್ನಾದಲ್ಲಿ ಸರಣಿ ಸಭೆಗಳು ಆರಂಭಗೊಂಡಿದೆ.
ಬಿಜೆಪಿ ಜೆಡಿಯು ನಾಯಕರ ನಡುವೆ ಅಪಸ್ವರ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ಬೆನ್ನಲ್ಲೇ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ನೀತಿ ಆಯೋಗದ ಸಭೆಗೆ ಗೈರಾಗಿದ್ದಾರೆ.
Advertisement
Advertisement
ನೀತಿಶ್ ಕುಮಾರ್ ಸರ್ಕಾರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳಲ್ಲಿ ಬಿಜೆಪಿ ಕೈವಾಡವಿರುವುದು ಖಚಿತವಾಗುತ್ತಿದ್ದಂತೆ ಅವರು ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಅವರು ಪಾಟ್ನಾದಲ್ಲಿ ಪಕ್ಷದ ಶಾಸಕರ ಸಭೆಯನ್ನು ನಡೆಸಿದ್ದಾರೆ. ನಾಳೆ ಮತ್ತೊಂದು ಸಭೆಯನ್ನು ಕರೆದಿದ್ದಾರೆ. ಈ ಸಭೆಗಳ ಬೆನ್ನಲ್ಲೇ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮಂಗಳವಾರ ಶಾಸಕರ ಸಭೆಗೆ ನಡೆಸಲು ಮುಂದಾಗಿದ್ದು ತನ್ನ ಎಲ್ಲಾ 79 ಶಾಸಕರಿಗೆ ಸೋಮವಾರ ರಾತ್ರಿಯೊಳಗೆ ಪಾಟ್ನಾದಲ್ಲಿ ಇರುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಹ್ಯಾಟ್ರಿಕ್ ಸಾಧನೆ – ಪಿವಿ ಸಿಂಧುಗೆ ಚಿನ್ನ
Advertisement
ಜೆಡಿಯು ಮತ್ತು ಆರ್‌ಜೆಡಿಯಲ್ಲಿನ ಈ ಬೆಳವಣಿಗೆ ಬಿಜೆಪಿಯನ್ನು ದೂರವಿಟ್ಟು ಹೊಸ ಮೈತ್ರಿ ಸರ್ಕಾರ ರಚನೆ ಮಾಡುವ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಭಾನುವಾರ, ಹಣದುಬ್ಬರ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೇಜಸ್ವಿ ಅವರ ಅಭಿಯಾನದ ಬಗ್ಗೆ ಕೇಳಿದಾಗ, ಪ್ರತಿಭಟನೆ ಮಾಡುವ ಹಕ್ಕುಗಳನ್ನು ಅವರು ಹೊಂದಿದ್ದಾರೆ ಎಂದು ಜೆಡಿಯು ನಾಯಕರು ಹೇಳಿದರು. ಈ ನಡುವೆ ಎರಡು ಪಕ್ಷದ ನಾಯಕರು ಪರಸ್ಪರ ವಾಗ್ದಾಳಿ ನಡೆಸದಿರುವುದು ಅನುಮಾನ ಹೆಚ್ಚಲು ಕಾರಣವಾಗಿದೆ.
Advertisement
ಮಹಾರಾಷ್ಟ್ರದ ಮಾದರಿಯಲ್ಲಿ ಬಿಹಾರದಲ್ಲೂ ಜೆಡಿಯು ಮುಗಿಸಲು ತಂತ್ರ ನಡೆದಿದೆ ಎನ್ನಲಾಗುತ್ತಿದೆ. ಜೆಡಿಯು ಎರಡನೇ ಅಗ್ರಗಣ್ಯ ನಾಯಕರಾಗಿದ್ದ ಆರ್‌ಸಿಪಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಲು ಪ್ಲ್ಯಾನ್ ಮಾಡಿದ್ದು ಉದ್ದವ್ ಠಾಕ್ರೆ ರೀತಿಯಲ್ಲಿ ನಿತೀಶ್ ಕುಮಾರ್ ಮುಗಿಸಲು ತಂತ್ರ ರೂಪಿಸಿದೆ ಎನ್ನಲಾಗುತ್ತಿದೆ. ಈ ತಂತ್ರ ಗೊತ್ತಾಗುತ್ತಿದ್ದಂತೆ ನಿತೀಶ್ ಕುಮಾರ್ ಈಗ ಬಂಡಾಯ ಎದ್ದಿದ್ದು ತನ್ನ ಶಾಸಕರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ.
ಆರ್‌ಸಿಪಿ ಸಿಂಗ್, ನಿತೀಶ್ ಬಳಿಕ ಜೆಡಿಯುನ ಎರಡನೇ ನಾಯಕರಾಗಿದ್ದರು, ಹಿಂದೆ ನಿತೀಶ್ ಕುಮಾರ್ ಒಪ್ಪಿಗೆಯಿಲ್ಲದೆ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಸೇರಿದ್ದರು ಮತ್ತು ಈಗ ಅವರು ಸಂಸತ್ತು ಮತ್ತು ಪಕ್ಷದಿಂದ ಹೊರಗುಳಿದಿದ್ದರು. 2013 ಮತ್ತು 2022 ರ ನಡುವೆ ಅವರ ಕುಟುಂಬವು 47 ಜಮೀನುಗಳನ್ನು ಖರೀದಿಸಿದ ಬಗ್ಗೆ ಪಕ್ಷದ ಆರೋಪದ ನಡುವೆ ಅವರು ಶನಿವಾರ ಜೆಡಿಯು ತೊರೆದು ರಾಜೀನಾಮೆ ನೀಡಿದ್ದರು.
ನಾಳೆ ನಡೆಯುವ ಜೆಡಿಯು ಶಾಸಕರ ಸಭೆ ಪ್ರಾಮುಖ್ಯತೆ ಪಡೆದಿದ್ದು, ಈ ಸಭೆಗೆ ಎಷ್ಟು ಜನ ಶಾಸಕರು ಹಾಜರಾಗಲಿದ್ದಾರೆ ಎನ್ನುವುದರ ಮೇಲೆ ನಿತೀಶ್ ಸಿಎಂ ಕುರ್ಚಿಯ ಭವಿಷ್ಯ ನಿರ್ಧಾರವಾಗಲಿದೆ.