ಬೆಂಗಳೂರು: ಜೆಡಿಎಸ್ ಯುವ ನಾಯಕ ಮಧು ಬಂಗಾರಪ್ಪರನ್ನು ಕಾಂಗ್ರೆಸ್ಸಿಗೆ ಕರೆತರಲು ಸದ್ದಿಲ್ಲದೆ ಸಿದ್ಧತೆ ನಡೆದಿದೆ.
ಜೆಡಿಎಸ್ ನಾಯಕರ ವಿರುದ್ಧ ಬೇಸರಗೊಂಡು ಕಳೆದ 19 ತಿಂಗಳಿನಿಂದ ಮಧು ಬಂಗಾರಪ್ಪ ಮೌನಕ್ಕೆ ಶರಣಾಗಿದ್ದರು. ಇತ್ತ ಶಿವಮೊಗ್ಗ ಜಿಲ್ಲೆಯಲ್ಲಿ ಕಾಗೋಡು ತಿಮ್ಮಪ್ಪರಂತಹ ಹಿರಿಯರನ್ನು ಬಿಟ್ಟರೆ ಕಾಂಗ್ರೆಸ್ಸಿಗೆ ಬೇರೆ ನಾಯಕರಿಲ್ಲ ಎಂಬಂತಾಗಿದೆ.
ಇದರಿಂದ ಕೈ ನಾಯಕರೇ ಆಸಕ್ತಿ ವಹಿಸಿ ಮಧು ಬಂಗಾರಪ್ಪರನ್ನು ಕಾಂಗ್ರೆಸ್ಸಿಗೆ ಕರೆತರಲು ಮುಂದಾಗಿದ್ದಾರೆ. ವಾರದ ಹಿಂದೆ ಸಾಗರ ಹಾಗೂ ಸೊರಬ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಸದಾಶಿವ ನಗರದ ಮಧು ನಿವಾಸದಲ್ಲಿ ಭೇಟಿಮಾಡಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತ ರಾಜ್ಯ ನಾಯಕರು ಶಿವಮೊಗ್ಗ ಜಿಲ್ಲೆಯಲ್ಲಿ ನಾಯಕತ್ವದ ಕೊರತೆ ಸರಿದೂಗಿಸಲು ಮಧು ಮನವೊಲಿಕೆಗೆ ಮುಂದಾಗಿದ್ದಾರೆ. 19 ತಿಂಗಳಿನಿಂದ ತೆರೆಮರೆಯಲ್ಲಿಯೇ ಇದ್ದ ಮಧು ಬಂಗಾರಪ್ಪ ಮತ್ತೆ ರಾಜಕೀಯವಾಗಿ ಆ್ಯಕ್ಟೀವ್ ಆಗಲು ಮುಂದಾಗಿದ್ದಾರೆ. ಕೆಪಿಸಿಸಿ ನೂತನ ಅಧ್ಯಕ್ಷರ ನೇಮಕವಾಗಿ ಡಿ.ಕೆ ಶಿವಕುಮಾರ್ ಅಧ್ಯಕ್ಷರಾದರೆ ಖಂಡಿತಾ ಬರುವುದಾಗಿ ಸ್ಥಳೀಯ ನಾಯಕರಿಗೆ ಮಧು ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಮಧು ಬಂಗಾರಪ್ಪ ಆಪರೇಷನ್ ಹಸ್ತಕ್ಕೆ ಒಳಗಾಗಿ ತೆನೆ ಇಳಿಸಿ ಹೋಗಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ತಿಳಿದು ದಳಪತಿಗಳು ಮೌನವಾಗಿದ್ದಾರೆ. ಪಕ್ಷದ ವರಿಷ್ಠರ ಮೌನ ಕಂಡು ಕಾಂಗ್ರೆಸ್ ಸೇರುವುದೆ ಸೇಫ್ ಎಂದು ಮಧು ಬಂಗಾರಪ್ಪ ನಿರ್ಧರಿಸಿದಂತಿದೆ. ಕೆಲವೇ ದಿನಗಳಲ್ಲಿ ಮಧು ಬಂಗಾರಪ್ಪ ಕೈ ತೆಕ್ಕೆಗೆ ಸೇರುವುದು ಬಹುತೇಕ ಖಚಿತವಾಗಿದೆ.