ಹಾಸನ: ಉಪಚುನಾವಣೆಯಲ್ಲಿ ಕೆ.ಆರ್.ಪೇಟೆಯಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವ ಪ್ರಸ್ತಾಪ ಪಕ್ಷದ ವರಿಷ್ಠರ ಬಳಿ ಇಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್, ಕೆಲ ಕಾರ್ಯಕರ್ತರು ಈ ಕುರಿತು ಒತ್ತಡ ಹೇರುತ್ತಿರುವುದು ನಿಜ. ಇಂತಹ ಯಾವುದೇ ಪ್ರಸ್ತಾಪ ರಾಷ್ಟ್ರೀಯ ನಾಯಕರು ಹಾಗೂ ಕುಮಾರಸ್ವಾಮಿ ಅವರ ಬಳಿ ಇಲ್ಲ. ಕುಮಾರಸ್ವಾಮಿಯವರೇ ಈ ಕುರಿತು ಸ್ಪಷ್ಟಪಡಿಸುತ್ತಾರೆ ಎಂದು ತಿಳಿಸಿದ್ದಾರೆ.
ಕೆಲ ಕಾರ್ಯಕರ್ತರ ಒತ್ತಡ ಇದೆ. ಆದರೆ ನಿಖಿಲ್ ಅವರ ಸ್ಪರ್ಧೆ ಇಲ್ಲ ಎಂದು ತೀರ್ಮಾನ ಮಾಡಲಾಗಿದೆ. ಪಕ್ಷದಲ್ಲಿ ನಿಷ್ಟಾವಂತರಾಗಿ ಕೆಲಸ ಮಾಡುತ್ತಿರುವ ಯಾರನ್ನಾದರು ಅಭ್ಯರ್ಥಿ ಮಾಡಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದರು.
ಈ ಕುರಿತು ಚರ್ಚಿಸಲು ಇಂದು ಸಭೆ ಕರೆಯಲಾಗಿದೆ. ಜೆಡಿಎಸ್ ಒಂದು ಕುಟುಂಬದ ಪಕ್ಷ ಎಂಬ ಆರೋಪ ಕೆಲ ವೇಳೆ ಇತ್ತು. ಹಾಗಾಗಿಯೇ ಹಿಂದುಳಿದವರನ್ನು ಕರೆತಂದು ಅವಕಾಶ ನೀಡಲಾಗಿತ್ತು. ಆದರೆ, ಅವರು ಹೀಗೆ ಮಾಡಿ ಹೋಗಿದ್ದಾರೆ. ಹುಣಸೂರಿನಲ್ಲಿಯೂ ಕಾರ್ಯಕರ್ತರ ಸಭೆ ಕರೆದು ಪಕ್ಷದ ನಿಷ್ಠರಿಗೆ ಅವಕಾಶ ನೀಡಲಾಗುತ್ತದೆ ಎಂದು ಅನರ್ಹಗೊಂಡ ಹುಣಸೂರು ಶಾಸಕ ವಿಶ್ವನಾಥ್ ವಿರುದ್ಧ ಸಾ.ರ.ಮಹೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.