ಮಂಡ್ಯ: ಮದ್ದೂರಿನ (Maddur) ಹೊಳೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಜೆಡಿಎಸ್ ಮುಖಂಡನೊಬ್ಬನ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ಮದ್ದೂರಿನ ಜೆಡಿಎಸ್ (JDS) ಮುಖಂಡ ಹಾಗೂ ಮಾಜಿ ರೌಡಿಶೀಟರ್ ಅಪ್ಪುಗೌಡ ಹಲ್ಲೆಗೊಳಗಾದವ. ಅಪ್ಪುಗೌಡ ಪ್ರತಿನಿತ್ಯ ತಮ್ಮ ಮನೆಯನ್ನು ಬಿಟ್ಟರೆ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಬಂದು ಕರ್ಪೂರ ಹಚ್ಚಿ ಕೈ ಮುಗಿದು ಬೇರೆ ಕೆಲಸಕ್ಕೆ ಹೋಗ್ತಾ ಇದ್ದ. ಅದೇ ರೀತಿ ಇಂದು ಅಪ್ಪುಗೌಡ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ ಕೈ ಮುಗಿಯುವ ವೇಳೆ ಆರು ಮಂದಿಯ ಗುಂಪು ಈತನ ಮೇಲೆ ಅಟ್ಯಾಕ್ ಮಾಡಿದೆ. ಮೂವರು ನೇರವಾಗಿ ಅಪ್ಪುಗೌಡನ ಮೇಲೆ ದಾಳಿ ನಡೆಸಲು ಮುಂದಾದರೆ, ಇನ್ನೂ ಮೂವರು ಅಪ್ಪುಗೌಡ ಎಸ್ಕೇಪ್ ಆಗದ ರೀತಿ ನೋಡಿಕೊಳ್ಳುತ್ತಾ ಇರುತ್ತಾರೆ. ಇದನ್ನೂ ಓದಿ: ಕಾಲಮಿತಿಯೊಳಗೆ ಜನನ-ಮರಣ ಪ್ರಮಾಣ ಪತ್ರ ವಿತರಿಸಿ – ಡಿಸಿ ಖಡಕ್ ಸೂಚನೆ
ಅಪ್ಪುಗೌಡನ ಬಳಿ ಈ ಹಂತಕರು ಚಾಕು ಹಿಡಿದು ಬರುತ್ತಿದ್ದ ಹಾಗೆ ಅಲ್ಲಿಯೇ ಇದ್ದ ಇತರ ಭಕ್ತರು ಹಾಗೂ ಅರ್ಚಕರು ಕಿರುಚಿಕೊಳ್ಳುತ್ತಾರೆ. ಬಳಿಕ ಅಲರ್ಟ್ ಆದ ಅಪ್ಪುಗೌಡ ಹಂತಕರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತಾನೆ. ಆದರೆ ಇಬ್ಬರು ಹಂತಕರು ತಮ್ಮ ಕೈಯಲ್ಲಿ ಇದ್ದ ಮಾರಾಕಾಸ್ತ್ರದಿಂದ ಅಪ್ಪುಗೌಡನ ಭುಜ ಹಾಗೂ ಬೆನ್ನಿನ ಭಾಗಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಲ್ಲೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳೀಯರು ಮುಂದೆ ಬಾರದಂತೆ ಹಂತಕರು ಲಾಂಗ್ ಹಿಡಿದು ಜನರನ್ನು ಎದುರಿಸಿದ್ದಾರೆ. ಈ ವೇಳೆ ದೇವಸ್ಥಾನಕ್ಕೆ ಆಂಜನೇಯಸ್ವಾಮಿ ದರ್ಶನಕ್ಕೆ ಎಂದು ಮಫ್ತಿಯಲ್ಲಿ ಬಂದ ಪೊಲೀಸ್ ಪೇದೆ ಕುಮಾರಸ್ವಾಮಿ ಹಂತಕರ ಕಡೆಗೆ ಹೂವಿನ ಗಿಡದ ಫಾಟ್ ಎಸೆದು ಅಪ್ಪುಗೌಡನನ್ನು ರಕ್ಷಣೆ ಮಾಡುತ್ತಾರೆ. ಇದಾದ ನಂತರ ಸ್ಥಳೀಯರು ಎಲ್ಲರೂ ಹಂತಕರ ಕಡೆಗೆ ಸುತ್ತುವರೆಯಲು ಮುಂದಾಗುತ್ತಿದ್ದಂತೆ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಅಪ್ಪುಗೌಡನ ಕೊಲೆಯ ಯತ್ನ ವಿಫಲವಾಗುತ್ತಿದ್ದಂತೆ ಆರು ಮಂದಿ ಹಂತಕರು ಟಾಟಾಸುಮೋದಲ್ಲಿ ಪರಾರಿಯಾಗಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಪೊಲೀಸ್ ಪೇದೆ ಕುಮಾರಸ್ವಾಮಿ ತಮ್ಮ ಬೈಕ್‌ನಲ್ಲಿ ಹಂತಕರನ್ನು ಹಿಂಬಾಲಿಸಿದ್ದಾರೆ. ದಾರಿ ಮಧ್ಯದಲ್ಲೇ ಕುಮಾರಸ್ವಾಮಿ ಕಂಟ್ರೋಲ್ ರೂಂಗೆ ಈ ಬಗ್ಗೆ ಮಾಹಿತಿಯನ್ನು ಸಹ ನೀಡಿದ್ದಾರೆ. ಹಂತಕರು ಹಲಗೂರು ಬಳಿ ಹೋಗ್ತಾ ಇದ್ದಂತೆ ಹಲಗೂರು ಪೊಲೀಸರು ಸ್ಥಳೀಯರ ಸಹಾಯದಿಂದ ಕೊಲೆಗೆ ಯತ್ನಿಸಿದ ಆರು ಮಂದಿಯನ್ನು ಬಂಧಿಸಿದ್ದಾರೆ. ಬಳಿಕ ಬಂಧಿತರನ್ನು ವಿಚಾರಣೆ ಮಾಡಿದಾಗ ಈ ಕೃತ್ಯದ ಕರ್ತೃ ಅಪ್ಪುಗೌಡನ ಸ್ನೇಹಿತ ಮಧು ಎಂದು ತಿಳಿದು ಬಂದಿದೆ. ಬಳಿಕ ಮಧು ಎಂಬಾತನನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಪರ ಬ್ಯಾಟ್ ಬೀಸಿದ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ
ಬಂಧಿತ ಆರೋಪಿ ಮಧು ಹಾಗೂ ಹಲ್ಲೆಗೆ ಒಳಗಾಗಿರುವ ಅಪ್ಪುಗೌಡ ಇಬ್ಬರು ಸಹ ಈ ಹಿಂದೆ ಒಳ್ಳೆಯ ಸ್ನೇಹಿತರಾಗಿದ್ದರು. ಇಬ್ಬರು ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ವ್ಯವಹಾರವನ್ನು ಒಟ್ಟಿಗೆ ಮಾಡುತ್ತಿದ್ದರು. ಆದರೆ ಕಳೆದ ಆರು ತಿಂಗಳ ಹಿಂದೆ ಇವರಿಬ್ಬರ ಮಧ್ಯೆ ವ್ಯವಹಾರದಲ್ಲಿ ವೈಮನಸ್ಸು ಬಂದಿದೆ. ಇದೇ ಕಾರಣಕ್ಕೆ ಮಧು, ಅಪ್ಪುಗೌಡನನ್ನು ಕೊಲೆ ಮಾಡಬೇಕೆಂದು ಸ್ಕೆಚ್ ಹಾಕಿದ್ದ. ಕೊನೆಗೆ ಬೆಂಗಳೂರಿನ ಮಾಜಿ ಮೇಯರ್ ವಾಸು ಹತ್ಯೆ ಕೇಸ್‌ನಲ್ಲಿ ಜೈಲು ಸೇರಿರುವ ಜಗದೀಶ್‌ಗೆ ಈ ಡೀಲ್ ನೀಡಿದ್ದಾನೆ. ಜಗದೀಶ್ ಜೈಲಿನಲ್ಲಿ ಇದ್ದುಕೊಂಡು ತನ್ನ ಶಿಷ್ಯಂದಿರಾದ ಮನು, ಮನೋಜ್, ಅಜಯ್, ಪಾಪಣ್ಣಿ, ನಿಶ್ಚಿತ್ ಹಾಗೂ ಅನಿಲ್‌ಗೆ ಅಪ್ಪುಗೌಡನನ್ನು ಕೊಲೆ ಮಾಡುವ ಜವಾಬ್ದಾರಿಯನ್ನು ನೀಡಿದ್ದಾನೆ. ಅದರಂತೆ ಇಂದು ಕೊಲೆಯ ಯತ್ನ ನಡೆಸಿದ್ದರು.
Web Stories