– ಐಟಿಗೆ ಪತ್ರ ಬರೆದ್ರೆ ನನ್ನ ವ್ಯಕ್ತಿತ್ವ ನನ್ನಿಂದಲೇ ಹಾಳಾಗುತ್ತೆ
– ರಾಜಣ್ಣಗೆ ಎಚ್‍ಡಿಡಿ ತಿರುಗೇಟು
– ನಾನು ಮಾಜಿ ಪ್ರಧಾನಿ ಅನ್ನೋದನ್ನ ಕೆಲವ್ರು ಮರೆತಿದ್ದಾರೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಆರ್ಥಿಕತೆಗಿಂತ ಸಂವಿಧಾನದ 370 ವಿಧಿ ಬಗ್ಗೆಯೇ ಹೆಚ್ಚು ನಂಬಿಕೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಲೇವಡಿ ಮಾಡಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ನಿರ್ಮಲಾ ಸೀತರಾಮನ್ ಪತಿ ಬಿಜೆಪಿ ಪಕ್ಷದವರಲ್ಲ. ಆದರೆ ಸದ್ಯ ದೇಶದ ಆರ್ಥಿಕ ಸ್ಥಿತಿ ಸರಿಯಿಲ್ಲ. ಹೀಗಾಗಿ ಅವರ ಹೇಳಿಕೆ ಸರಿಯಾಗಿದೆ. ವಿಶ್ಚ ಬ್ಯಾಂಕ್ ಸೇರಿದಂತೆ ಹಲವು ಸಂಸ್ಥೆಗಳು ಪರಿಸ್ಥಿತಿ ಸರಿ ಇಲ್ಲ ಅಂತ ಹೇಳಿದ್ದಾರೆ. ಪ್ರಧಾನಿ ಮೋದಿ ಅವರಿಗೂ ಇದರ ಬಗ್ಗೆ ಗೊತ್ತಿದೆ. ಆದರೆ ಮೋದಿ ಅವರಿಗೆ 370 ವಿಧಿಯನ್ನು ರದ್ದುಗೊಳಿಸಿದ್ದರ ಬಗ್ಗೆ ಹೆಚ್ಚಿನ ನಂಬಿಕೆ ಇದೆ. ಇದನ್ನೆ ಮುಂದಿಟ್ಟುಕೊಂಡು ಎರಡು ರಾಜ್ಯಗಳ ಚುನಾವಣೆ ಮೋದಿ ಮಾಡುತ್ತಿದ್ದಾರೆ ಎಂದು ಕುಟುಕಿದರು.
Advertisement
Advertisement
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಮಸೂದೆ ಪಾಸಾಗಿದೆ. ಈಗ ರದ್ದು ಗೊಳಿಸಿದ ವಿಧಿಯನ್ನು ಯಾರು ವಾಪಸ್ ತರುತ್ತೀರಾ ಅಂತ ಮೋದಿ ಸವಾಲು ಹಾಕುತ್ತಾರೆ. ಈಗ ಅದರ ಮೇಲೆ ಚುನಾವಣೆ ಆಗುತ್ತಿದೆ. ಸ್ಥಳೀಯ ವಿಷಯಗಳನ್ನು ಮುಖ್ಯವಾಗಿ ಪ್ರಚಾರಕ್ಕೆ ಬಳಸಬೇಕು. ಆದರೆ ಈಗ ಅದು ಆಗುತ್ತಿಲ್ಲ ಎಂದು ಪರೋಕ್ಷವಾಗಿ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
Advertisement
ನನ್ನ ಮೇಲೆ ಐಟಿ ದಾಳಿಗೆ ಕಾರಣ ಅಂತ ಹೇಳಿದ್ದ ಮಾಜಿ ಶಾಸಕ ರಾಜಣ್ಣ ಅವರಿಗೆ ಎಚ್.ಡಿ.ದೇವೇಗೌಡ ತಿರುಗೇಟು ಕೊಟ್ಟಿದ್ದಾರೆ. ರಾಜಣ್ಣ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ದೇಶದ ಪ್ರಧಾನಿ ಆದವನು ನಾನು. ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆಯುವುದಕ್ಕೆ ಆಗುತ್ತಾ? ಪತ್ರ ಬರೆದರೆ ನನ್ನ ವ್ಯಕ್ತಿತ್ವಕ್ಕೆ ನಾನೇ ಕುಂದು ಮಾಡಿಕೊಂಡಂತೆ. ಆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
Advertisement
ರೈತರ ಸಾಲಮನ್ನಾ ಸಂಪೂರ್ಣ ಮಾಡಲು ಆಗಲ್ಲ ಎನ್ನುವ ಸಿಎಂ ಯಡಿಯೂರಪ್ಪ ಹೇಳಿಕೆಗೆ ಎಚ್.ಡಿ. ದೇವೇಗೌಡ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಸಿಎಂ ಯಡಿಯೂರಪ್ಪ ಹಾಗೇ ಮಾಡುವುದಿಲ್ಲ ಅಂತ ನಂಬಿಕೆ ಇದೆ. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ 24 ಗಂಟೆಯೊಳಗೆ ಸಾಲಮನ್ನಾ ಮಾಡಬೇಕು ಅಂತ ಯಡಿಯೂರಪ್ಪ ಒತ್ತಾಯ ಮಾಡಿದ್ದರು. ಕುಮಾರಸ್ವಾಮಿ ಸಿಎಂ ಆದಾಗ ಸಹಕಾರಿ ಬ್ಯಾಂಕುಗಳ ಸಾಲಮನ್ನಾಕ್ಕೆ ಹಣ ಎತ್ತಿಟ್ಟಿದರು. ಸಹಕಾರಿ ಬ್ಯಾಂಕ್‍ನ ಸಾಲ ಬಹುತೇಕ ಪೂರ್ಣವಾಗಿದೆ. ಶೆಡ್ಯುಲ್ಡ್ ಬ್ಯಾಂಕ್ ಸಾಲದ ಬಗ್ಗೆ ಸ್ವಲ್ಪ ಗೊಂದಲವಿದೆ. ನಾನು ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತಾಡಿದ್ದೇನೆ. ಸಹಕಾರ ಬ್ಯಾಂಕ್ ಸಾಲಮನ್ನಾಗೆ ಇಟ್ಟಿದ್ದ ಹಣದಲ್ಲಿ ಇನ್ನು ಸ್ವಲ್ಪ ಉಳಿದಿದೆ. ಉಳಿದ ಹಣ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಬಳಸಿಕೊಳ್ಳಲಾಗುತ್ತಿದೆ ಅನ್ನಿಸುತ್ತದೆ.
ಕಾಂಗ್ರೆಸ್ ಅನರ್ಹ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ದೇವೇಗೌಡ ಅವರು, ಕಾಂಗ್ರೆಸ್ ತೀರ್ಮಾನದ ಬಗ್ಗೆ ನನಗೇನು ಗೊತ್ತಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ವಾಪಸ್ ಬಂದರೆ ಕರೆದುಕೊಳ್ಳುತ್ತೇವೆ ಅಂತ ಹೇಳಿದ್ದನ್ನು ಕೇಳಿದ್ದೇನೆ. ಆದರೆ ಅವ್ರ ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತದೆ ಎನ್ನುವುದು ನನಗೇನು ಗೊತ್ತು. ಆ ಬಗ್ಗೆ ಅವರ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ನಮ್ಮ ಪಕ್ಷದಲ್ಲಿ ಮೂವರು ಮಾತ್ರ ಹೋಗಿದ್ದಾರೆ. ಯಾವುದೇ ಕಾರಣಕ್ಕೂ ಅನರ್ಹ ಶಾಸಕರನ್ನು ವಾಪಸ್ ಕರೆಯುವುದಿಲ್ಲ. ಈಗಾಗಲೇ ಅಭ್ಯರ್ಥಿ ಹಾಕುತ್ತೇವೆ ಅಂತ ಘೋಷಣೆ ಮಾಡಿದ್ದೇವೆ. ಅವರನ್ನು ಮತ್ತೆ ಯಾಕೆ ವಾಪಸ್ ಕರೆಯೋಣ? 15 ಕ್ಷೇತ್ರದಲ್ಲೂ ಅಭ್ಯರ್ಥಿ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.
ಉಪ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಪತನ ಆಗುವ ವಿಷಯಕ್ಕೆ ನಾನು ಏನು ಮಾತನಾಡುವುದಿಲ್ಲ. ಪ್ರಧಾನಿ ಮೋದಿ ಹೆಸರು ಬಳಸಿಕೊಂಡು ಅವರು ಚುನಾವಣೆ ಎದುರಿಸುತ್ತಾರೆ. ಉಪ ಚುನಾವಣೆಯಲ್ಲೂ ಅದನ್ನೇ ಮಾಡುತ್ತಾರೆ. ಮೋದಿ ಅವರಿಗೆ ಪರ್ಯಾಯ ನಾಯಕರು ಬೇಕು. ಆದರೆ ನಮ್ಮದು ಪ್ರಾದೇಶಿಕ ಪಕ್ಷ, ರಾಷ್ಟ್ರೀಯ ಪಕ್ಷ ಅಲ್ಲ. ನಾವು ಪ್ರಾದೇಶಿಕ ನಾಯಕರು. ನಾನು ಮಾಜಿ ಪ್ರಧಾನಿ ಎನ್ನುವುದು ಕೆಲವರಿಗೆ ಮರೆತೇ ಹೋಗಿದೆ ಎಂದು ಪರೋಕ್ಷವಾಗಿ ಉಪ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಆಗುತ್ತದೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.