BelgaumDistrictsKarnatakaLatestMain Post

ಭಾರತದ ಮತದಾರನಿಂದ ಬಿಜೆಪಿಗೆ ಒಂದು ದೊಡ್ಡ ವಿದಾಯ- ಎಚ್. ವಿಶ್ವನಾಥ್

– ಮಾತಿನ ಮಲ್ಲನಾಗಿ ಭವಿಷ್ಯ ರೂಪಿಸಲು ಆಗಲ್ಲ

ಬೆಳಗಾವಿ: ಭಾರತದ ಮತದಾರ ಭಾರತೀಯ ಜನತಾ ಪಕ್ಷಕ್ಕೆ ಒಂದು ದೊಡ್ಡ ವಿದಾಯವನ್ನು ಹೇಳುತ್ತಿದ್ದಾನೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಹೇಳಿದ್ರು.

5 ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೋದಿಯವರ ಮೇಲೆ ಭ್ರಮನಿರಸನವಾಗಿದೆ. ಅವರ ಮೇಲೆ ಇದ್ದಂತಹ ಅಪಾರ ನಿರೀಕ್ಷೆಗಳು ಕೂಡ ಹುಸಿಯಾಗಿವೆ ಅಂತ ಭಾರತೀಯ ಮತದಾರ ಈ ಪಂಚ ರಾಜ್ಯಗಳ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾನೆ. ಇದು ಬಿಜೆಪಿಗೂ ಕೂಡ ಒಂದು ದೊಡ್ಡ ಪಾಠವಾಗಿದೆ. ಅಲ್ಲದೇ ಭಾರತದ ಮತದಾರನಿಗೂ ಕೂಡ ಹಿಂದಿನ ಚುನಾವಣೆಗಳನ್ನು ಗಮನಿಸಿದ್ರೆ ಒಂದು ಹೊಸ ಅನುಭವ ಅಂತಂದ್ರೆ ತಪ್ಪಾಗಲಾರದು ಅಂದ್ರು.

ಕಳೆದ ಬಾರಿಗೂ ಈ ಬಾರಿ ಫಲಿತಾಂಶ ಹೊರಬೀಳುತ್ತಿರುವುದನ್ನು ಗಮನಿಸಿದ್ರೆ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಹೆಚ್ಚು ಲೋಕಸಭಾ ಸ್ಥಾನಗಳು ಇರುವ ರಾಜ್ಯಗಳಾಗಿವೆ. ಆದ್ರೆ ಇಂದಿನ ಈ ಫಲಿತಾಂಶ ಅದಕ್ಕೆ ಬಹಳ ವಿರುದ್ಧವಾಗಿ ಹೋಗಿದ್ದು ಬಿಜೆಪಿ ಕುಸಿದಿದೆ. ಒಟ್ಟಾರೆ ಈ ಎರಡೂ ರಾಜ್ಯಗಳಲ್ಲಿ ಮತದಾರನ ತೀರ್ಪು ಬಹಳ ಮುಖ್ಯವಾಗಿದೆ. ಅಂತಹ ಒಂದು ದೊಡ್ಡ ತೀರ್ಪನ್ನು ದೊಡ್ಡ ದೇಶದ ಮತದಾರ ಬಹಳ ದೂರದೃಷ್ಟಿಯಿಂದ ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾನೆ ಅಂತ ಹೇಳಿದ್ರು.

ಇಂದು ಹೊರಬೀಳುವ ಚುನಾವಣಾ ಫಲಿತಾಂಶದಿಂದ ದೆಹಲಿಯ ಬಿಜೆಪಿ ಮುಖ್ಯ ಕಚೇರಿಗೆ ಇಂದು ಒಂದು ಅಲೆ ಅಪ್ಪಳಿಸಲಿದೆ. ಹೀಗಾಗಿ ಮೋದಿಯವರು ತರಗೆಲೆ ರೀತಿ ಆಗಿ ಹೋಗಿದ್ದಾರೆ. ಭಾರತದ ಮತದಾರ ಭಾರತೀಯ ಜನತಾ ಪಕ್ಷಕ್ಕೆ ಒಂದು ದೊಡ್ಡ ಸಂದೇಶವನ್ನು ರವಾನಿಸಿದ್ದಾನೆ. ಬರೀ ಮಾತಿನ ಮಂಟಪದಿಂದ ಭಾರತದ ಆಡಳಿತವನ್ನು ಮಾಡಲು ಸಾಧ್ಯವಿಲ್ಲ. ಮಾತಿನ ಮಲ್ಲನಾಗಿ ಭಾರತದ ಭವಿಷ್ಯವನ್ನು ರೂಪಿಸಲು ಆಗಲ್ಲ. ಭಾರತ ಬಹುವಿಧದ, ವಿವಿಧ ಜಾತಿ, ಜನಾಂಗ, ಧರ್ಮದ ಭಾಷಿಕರನ್ನು ಹೊಂದಿರುವಂತಹ ಮತ್ತು ಗಣರಾಜ್ಯ ಒಕ್ಕೂಟ ಇರುವಂತಹ ಭಾರತವನ್ನು ನಿಮ್ಮ ಮಾತುಗಳಿಂದಷ್ಟೇ ಬದಲಿಸಲು ಆಗಲ್ಲ ಅನ್ನುವಂತಹ ವಿಚಾರ ಈ 5 ರಾಜ್ಯಗಳ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಗೆ ತೋರಿಸಿದ್ದಾನೆ ಅಂತ ಅವರು ತಿಳಿಸಿದ್ರು.

ಜೆಡಿಎಸ್ ಒಂದು ಪ್ರಾಂತೀಯ ಪಕ್ಷವಾಗಿದೆ. ಈ ಪ್ರಾಂತೀಯ ಪಕ್ಷಗಳು ಪಂಚರಾಜ್ಯ ಚುನಾವಣೆಯಲ್ಲಿ ಬಲ ಆಗುತ್ತಿವೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಮತದಾರ ಒಂದು ನಂಬಿಕೆಯನ್ನು ತೋರಿಸುತ್ತಿದ್ದಾನೆ. ಹೀಗಾಗಿ ಅಲ್ಲಲ್ಲಿ ಸಣ್ಣಪುಟ್ಟ ಪಾರ್ಟಿಗಳು ಒಂದು ಕಡೆ ಸೇರುತ್ತಿವೆ. ಇವುಗಳ ಏಕೀಕರಣದಿಂದ ದೊಡ್ಡದಾಗಿ ಮೆರೀತಿದ್ದ ಬಿಜೆಪಿಯನ್ನು ಮಣಿಸುವಲ್ಲಿ ಪ್ರಾಂತೀಯ ಪಕ್ಷಗಳ ಪಾತ್ರ ಬಹಳ ಹಿರಿದಾಗುತ್ತಿದ್ದು, ಇದಕ್ಕೆ ನಾನು ಹೆಮ್ಮೆ ಪಡುತ್ತೇನೆ ಅಂದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *

Back to top button