ಮಂಡ್ಯ: ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ವಿವಾದ ಹೆಚ್ಚಾದಂತೆ ಕಾಣುತ್ತಿದೆ. ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಸೇರಿದಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಸೋಲನುಭವಿಸಿದ ಕಾಂಗ್ರೆಸ್ ಮುಖಂಡರು ಪಕ್ಷೇತರ ಅಭ್ಯರ್ಥಿ ಸುಮಲತಾ ಜೊತೆ ಖಾಸಗಿ ಹೋಟೆಲ್‍ನಲ್ಲಿ ಕಾಣಿಸಿಕೊಂಡಿರುವುದು ಮಂಡ್ಯ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಸುಮಲತಾ ಜೊತೆ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸಿರುವ ಸಿಸಿಟಿವಿ ವಿಡಿಯೋ ವೈರಲ್ ಆಗಿರುವುದು ಮಂಡ್ಯ ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮತ್ತಷ್ಟು ಅಂತರಕ್ಕೆ ಕಾರಣವಾಗುತ್ತಿದೆ. ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಸೇರಿದಂತೆ ಕಾಂಗ್ರೆಸ್‍ನ ಹಲವು ಮುಖಂಡರು ಮೈತ್ರಿ ಧರ್ಮ ಮರೆತು ಸುಮಲತಾ ಪರ ಪ್ರಚಾರ ಮಾಡಿರುವುದು ಗುಟ್ಟಾಗಿ ಏನೂ ಉಳಿದಿಲ್ಲ. ಚಲುವರಾಯಸ್ವಾಮಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ವಿಡಿಯೋ ಕೂಡ ಹರಿದಾಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷದ ವರಿಷ್ಠರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಗಮನಿಸಿದರೆ ಅನುಮಾನ ಮೂಡುವಂತೆ ಮಾಡಿದೆ.
ಕಾಂಗ್ರೆಸ್ ಪಕ್ಷದ ವರಿಷ್ಠರೇ ಚಲುವರಾಯಸ್ವಾಮಿ ಸೇರಿದಂತೆ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‍ನ ಮಾಜಿ ಶಾಸಕರಿಗೆ ಹಾಗೂ ಸುಮಲತಾಗೆ ಬೆಂಬಲ ನೀಡುವಂತೆ ಸೂಚಿಸಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದು ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಆಕ್ರೋಶ ಹೊರಹಾಕುತ್ತಿದ್ದಾರೆ. ಜೊತೆಗೆ ಇಷ್ಟೆಲ್ಲ ಸಾಕ್ಷ್ಯಗಳಿದ್ದರೂ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕ್ರಮಕೈಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್ ಮುಖಂಡರ ಮೇಲೆ ಕೇಳಿ ಬಂದಿರುವ ಆರೋಪವನ್ನು ನಿರಾಕರಿಸುತ್ತಿರುವ ಸುಮಲತಾ ಬೆಂಬಲಿಗ ಸಚ್ಚಿದಾನಂದ, ನನ್ನ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಔತಣ ಕೂಟ ಹಮ್ಮಿಕೊಂಡಿದ್ದೆ. ಔತಣ ಕೂಟಕ್ಕೆ ಸುಮಲತಾ, ಚಲುವರಾಯಸ್ವಾಮಿ ಸೇರಿದಂತೆ ಮಂಡ್ಯ ಜಿಲ್ಲೆಯ ಹಲವು ಕಾಂಗ್ರೆಸ್ ಮುಖಂಡರನ್ನು ಆಹ್ವಾನಿಸಿದ್ದೆ. ಹೀಗಾಗಿ ನನ್ನ ಆಹ್ವಾನದ ಮೇರೆಗೆ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಸುಮಲತಾ ಎಲ್ಲರೂ ಆಗಮಿಸಿದ್ದರು. ಅಲ್ಲಿ ಯಾವುದೇ ರಾಜಕೀಯ ವಿಷಯ ಚರ್ಚೆಯಾಗಿಲ್ಲ. ಅಷ್ಟೇ ಅಲ್ಲದೆ ಮಂಡ್ಯದಲ್ಲಿ ಎಲ್ಲಿಯೂ ಚಲುವರಾಯಸ್ವಾಮಿ ಸುಮಲತಾ ಪರ ಪ್ರಚಾರ ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.