ಬೆಂಗಳೂರು: ಚಿಲುಮೆ (Chilume) ವೋಟರ್ ಐಡಿ ಅಕ್ರಮ ಪ್ರಕರಣದ ತನಿಖೆಗೆ ಒತ್ತಾಯಿಸಿ ಜೆಡಿಎಸ್ (JDS) ಇಂದು ಪ್ರತಿಭಟನೆ ನಡೆಸಿತು.
ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ನೇತೃತ್ವದಲ್ಲಿ, ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ವಿರುದ್ಧ ಭಿತ್ತಿಪತ್ರ ಹಿಡಿದು, ಘೋಷಣೆ ಕೂಗಿ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಬಳಿಕ ಚುನಾವಣೆ ಆಯೋಗಕ್ಕೆ ಪಾದಯಾತ್ರೆ ಮೂಲಕ ತೆರಳಿ ದೂರು ನೀಡಿದರು.
ಚುನಾವಣೆ ಆಯೋಗಕ್ಕೆ ದೂರು ನೀಡಿದ ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ, ಚಿಲುಮೆ ಅಕ್ರಮಕ್ಕೆ ಕಾರಣ ಯಾರು ಅಂತ ಸೂಕ್ತ ತನಿಖೆ ಆಗಬೇಕು. ಎಷ್ಟು ಲಕ್ಷ ವೋಟರ್ ಕಾರ್ಡ್ ಡಿಲೀಟ್ ಆಗಿವೆ ಅಂತ ಮಾಹಿತಿ ನೀಡಬೇಕು. ಇನ್ನು ಮುಂದೆ ಚುನಾವಣೆ ವೇಳೆ ರಿಟರ್ನಿಂಗ್ ಆಫೀಸ್‌ಗಳ ಬಳಿ ಇರುವ ಪಟ್ಟಿ ಹಾಗೂ ಅಭ್ಯರ್ಥಿಗಳು ಇರೋ ಪಟ್ಟಿ ಒಂದೇ ಇರುವಂತೆ ನೋಡಿಕೊಳ್ಳಬೇಕು ಎಂದರು. ಅಲ್ಲದೆ ಚುನಾವಣೆ ವೇಳೆ ಅಕ್ರಮ ಮಾಡಿದ ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ ಮಾಡಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಚಿಲುಮೆ ಕೇಸ್‍ನಲ್ಲಿ ಕಂಪ್ಲೇಂಟ್ ಜಟಾಪಟಿ- ಕಾಂಗ್ರೆಸ್‍ಗೂ ಮುನ್ನವೇ ಬಿಜೆಪಿ ದೂರು
ಇದೇ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದರು. ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಚಿಲುಮೆ ಅಕ್ರಮದಲ್ಲಿ ಇದ್ದಾವೆ. ಇಬ್ಬರು ಒಬ್ಬರ ಮೇಲೆ ಒಬ್ಬರು ಆರೋಪ ಮಾಡ್ತಿದ್ದಾರೆ. ಈ ಅಕ್ರಮದ ತನಿಖೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಆಗಬೇಕು ಎಂದು ಆಗ್ರಹ ಮಾಡಿದರು. ಚಿಲುಮೆ ಹಗರಣದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಜಾತಿ ಧರ್ಮ, ದಲಿತ, ಮುಸ್ಲಿಂ, ಗೌಡ ಎಂಬ ಹೆಸರು ಇರೋರನ್ನ ಪಟ್ಟಿಯಿಂದ ಡಿಲೀಟ್ ಮಾಡ್ತಿದ್ದಾರೆ. ಸೋಲಿನ ಭಯದಿಂದ ಹೀಗೆ ಬಿಜೆಪಿ ಅಕ್ರಮ ಮಾಡ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ವೋಟರ್ ಲಿಸ್ಟ್ ಹಗರಣ – ಮುಖ್ಯ ಆರೋಪಿ ರವಿಕುಮಾರ್ ಆಪ್ತ ಲೋಕೇಶ್ ಬಂಧನ