ಮೈಸೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಗೆ ಬರಬೇಡಿ ಎನ್ನಲು ಯಾರಿಂದಲೂ ಸಾಧ್ಯವಿಲ್ಲವೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಇರುವುದು ಎರಡು ಪಕ್ಷಗಳು, ಒಂದು ಜೆಡಿಎಸ್ ಮತ್ತೊಂದು ಕಾಂಗ್ರೆಸ್. ಎರಡೂ ಪಕ್ಷಗಳ ಸಾಮಾನ್ಯ ಕಾರ್ಯಕ್ರಮಗಳನ್ನು ಸಮನ್ವಯಮಾಡುವ ಸಲುವಾಗಿಯೇ ಸಮಿತಿ ರಚನೆಯಾಗಿದೆ. ಈ ಸಭೆಗೆ ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರು ಇರಲೇಬೇಕು. ಸಭೆಯಲ್ಲಿ ಪ್ರಮುಖವಾಗಿ ನಾನು ಹಾಗೂ ಗುಂಡುರಾವ್ ಇದ್ದರೆ ಮಾತ್ರ ಸಮನ್ವಯ ಸಮಿತಿ ಪೂರ್ಣವಾಗೋದು. ನನ್ನನ್ನು ಸಮಿತಿಗೆ ಬರಬೇಡಿ ಎನ್ನುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸೃಷ್ಟಿಯಾಗಿರುವ ಕಾರಣ ಕೂಡಲೇ ಸಮನ್ವಯ ಸಮಿತಿ ಸಭೆಯನ್ನು ಕರೆಯಬೇಕು. ಸಭೆಯಲ್ಲಿ ಪ್ರಮುಖವಾಗಿ ಕೊಡಗು ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಬೇಕು. ಹೀಗಾಗಿ ಸಿದ್ದರಾಮಯ್ಯನವರಿಗೆ ಸಭೆ ಕರೆಯುವಂತೆ ಕೇಳುತ್ತಿದ್ದೇನೆ. ಆದರೆ ಅವರು ಬ್ಯುಸಿಯಾಗಿರುವ ಕಾರಣ ಸಮನ್ವಯ ಸಮಿತಿ ಸಭೆಯನ್ನು ಕರೆಯುತ್ತಿಲ್ಲ ಎಂದು ಹೇಳಿದರು.
ಇದೇ ವೇಳೆ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿದ ಅವರು, ಸತ್ಯವಾಗಿ ಹೇಳಬೇಕೆಂದರೆ ಮೈತ್ರಿ ಸರ್ಕಾರಗಳಲ್ಲಿ ಅಭಿವೃದ್ಧಿ ಕಷ್ಟ. ಎಂದಿದ್ದರೂ ಮೈತ್ರಿ ಸರ್ಕಾರ ಮೈತ್ರಿ ಸರ್ಕಾರವೇ, ಸ್ವತಂತ್ರ ಸರ್ಕಾರ ಸ್ವತಂತ್ರ ಸರ್ಕಾರವೇ ಆಗಿದೆ. ಮೈತ್ರಿ ಸರ್ಕಾರದಲ್ಲಿ ಯಾವಾಗಲೂ ವ್ಯತ್ಯಾಸ ಇದ್ದೇ ಇರುತ್ತದೆ. ಹೀಗಾಗಿ ಅಭಿವೃದ್ಧಿ ಅಸಾಧ್ಯ ಎಂದು ಪ್ರತಿಕ್ರಿಯಿಸಿದರು.
ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾತನಾಡಿದ ಅವರು, ನೋಡಿ ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮದುವೆ ಆಗಿದೆ. ಹೀಗಾಗಿ ಅವರ ಹೇಳಿಕೆಗಳ ಬಗ್ಗೆ ಹೆಚ್ಚಾಗಿ ಮಾತನಾಡಲು ಆಗುವುದಿಲ್ಲ. ಈ ಮೊದಲು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯೊಂದಿಗೆ ಅಧಿಕಾರ ನಡೆಸಿದ್ದವು. ಆದರೆ ನಿರೀಕ್ಷೆಗೆ ಮೀರಿದ ಯಾವುದೇ ಕೆಲಸಗಳು ಮೈತ್ರಿ ಕೂಟದಿಂದ ನೆರವೇರಲಿಲ್ಲ. ಮುಂದಿನ ಚುನಾವಣೆಯಲ್ಲಿ ಮೈಸೂರಿನಲ್ಲಿ ಜೆಡಿಎಸ್ ಮಹಾನಗರದ ಚುಕ್ಕಾಣಿಯನ್ನು ಹಿಡಿದೇ ಹಿಡಿಯುತ್ತದೆ. ಆಗ ಮೈಸೂರಿನ ಅಭಿವೃದ್ಧಿಯನ್ನು ಮಾಡಿ ತೋರಿಸುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv