ಮಂಡ್ಯ: ನಟಿ ಸುಮಲತಾ ಅಂಬರೀಶ್ ಪರ ನಿಂತ ಸ್ಯಾಂಡಲ್‍ವುಡ್ ನಟರಾದ ಯಶ್ ಹಾಗೂ ದರ್ಶನ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.
ನಾನು ಯಶ್ ಜೋಡಿ ಎತ್ತುಗಳಂತೆ ಸುಮಲತಾರಿಗೆ ಹೆಗಲು ಕೊಡ್ತೀವಿ ಎಂದು ದರ್ಶನ್ ನಿನ್ನೆ ಹೇಳಿಕೆ ನೀಡಿದ್ದ ಬೆನ್ನಲ್ಲೇ ಜೆಡಿಎಸ್ ಕಾರ್ಯಕರ್ತರು ನಟರ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ. ಅಲ್ಲದೆ ತಮ್ಮ ಸಿಟ್ಟನ್ನು ಜೆಡಿಎಸ್ ಕರುನಾಡು ಎಂಬ ಫೇಸ್‍ಬುಕ್ ಪೇಜ್ ನಲ್ಲಿ ಬರೆದುಕೊಳ್ಳುವ ಮೂಲಕ ನಟರಿಗೆ ಸವಾಲೆಸೆದಿದ್ದಾರೆ.
ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?
“ನಾವು ದುಡ್ಡು ಕೊಟ್ಟು ಮೂರು ಗಂಟೆ ನಿಮ್ಮ ಸಿನಿಮಾ ನೋಡುತ್ತೇವೆ ಅಷ್ಟೆ. ಆದ್ರೆ ಪಕ್ಷದ ವಿಚಾರಕ್ಕೆ ಬಂದಾಗ ನಾವು ಕುಮಾರಣ್ಣನ ಬಿಟ್ಟು ಕೊಡಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾಗ ಜೋಡೆತ್ತುಗಳು ಎಲ್ಲಿ ಮೇಯೋಕೆ ಹೋಗಿದ್ವು..?. ಮಂಡ್ಯ ಬಸ್ ಆಕ್ಸಿಡೆಂಟ್, ಕಾವೇರಿ ಹೋರಾಟದ ಸಮಯದಲ್ಲಿ ಈ ಜೋಡಿ ಎತ್ತಗಳು ಎಲ್ಲಿ ಹೋಗಿದ್ದವು ಎಂದು ಪ್ರಶ್ನಿಸಿದ ಕಾರ್ಯಕರ್ತರು, ಜೋಡಿ ಎತ್ತುಗಳನ್ನು ಪಳಗಿಸಿ ಉಳುಮೆ ಮಾಡೋದು ಗೊತ್ತು. ಬನ್ನಿ ನಮ್ಮ ಮಂಡ್ಯಕ್ಕೆ” ಎಂದು ಸವಾಲು ಹಾಕಿದ್ದಾರೆ.
ದರ್ಶನ್ ಹೇಳಿದ್ದೇನು?
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸುಮಲತಾ ಅಂಬರೀಶ್ ಸೋಮವಾರ ತಮ್ಮ ಅಂತಿಮ ನಿರ್ಧಾರ ತಿಳಿಸಿದ್ದರು. ನಿನ್ನೆ ಖಾಸಗಿ ಹೊಟೇಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಪಕ್ಷೇತರವಾಗಿ ಅಭ್ಯರ್ಥಿಸುವ ತಮ್ಮ ದಿಟ್ಟ ನಿರ್ಧಾರವನ್ನು ಘೋಷಿಸಿದ್ದರು. ಈ ವೇಳೆ ನಟರಾದ ಯಶ್ ಹಾಗೂ ದರ್ಶನ್ ಸಾಥ್ ನೀಡಿದ್ದರು. ಅಲ್ಲದೆ ಇದೇ ಸಂದರ್ಭದಲ್ಲಿ ಮಾತನಾಡಿದ ದರ್ಶನ್, ನಾನೊಬ್ಬನೇ ಇಲ್ಲ. ನಮ್ಮ ಹೀರೋ ಯಶ್ ಕೂಡ ಇದ್ದಾರೆ. ನಮ್ಮದು ಒಂಟಿ ಎತ್ತಲ್ಲ, ಜೋಡಿ ಎತ್ತು. ಸುದೀಪ್ ಪ್ರಚಾರ ಮಾಡುವ ಬಗ್ಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು ಎಂದು ಪ್ರತಿಕ್ರಿಯಿಸಿದ್ದರು. ದರ್ಶನ್ ಅವರ ಈ ಹೇಳಿಕೆ ಇದೀಗ ಮಂಡ್ಯ ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿದೆ.