ದೇವೇಗೌಡರ ಸಮ್ಮುಖದಲ್ಲಿ ಎಚ್‍ಡಿಕೆಗೆ ಸ್ವಪಕ್ಷೀಯರಿಂದಲೇ ಕ್ಲಾಸ್

Public TV
2 Min Read
hdk hdd

– ನಾವು ಪಕ್ಷಕ್ಕಾಗಿ ದುಡಿದಿಲ್ಲವೇ?
– ಹೊರಟ್ಟಿ ನೇತೃತ್ವದ  ಸಭೆಯಲ್ಲಿ ತರಾಟೆ

ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸ್ವಪಕ್ಷೀಯರೇ ತರಾಟೆ ತಗೆದುಕೊಂಡಿದ್ದಾರೆ.

ಪದ್ಮನಾಭನಗರದ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಅವರ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಎಸ್.ಎಲ್.ಭೋಜೇಗೌಡ, ಕಾಂತರಾಜು, ಅಪ್ಪಾಜಿಗೌಡ, ಮರಿ ತಿಬ್ಬೇಗೌಡ, ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಅನೇಕರು ಶಾಸಕರ ಭವನದಿಂದ ಒಟ್ಟಾಗಿ ಆಗಮಿಸಿದ್ದರು. ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ದೇವೇಗೌಡರ ನಿವಾಸಕ್ಕೆ ಬಂದಿದ್ದರು. ಆದರೆ ಸಭೆಗೆ 17 ಮೇಲ್ಮನೆಯ ಜೆಡಿಎಸ್ ಸದಸ್ಯರ ಪೈಕಿ ರಮೇಶ್ ಗೌಡ ಮತ್ತು ಬಿ.ಎಂ.ಫಾರೂಕ್ ಗೈರಾಗಿದ್ದರು.

Basavaraj horatti

ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಿಧಾನ ಪರಿಷತ್ ಸದಸ್ಯರು ಅಸಮಾಧಾನ ಹೊರ ಹಾಕಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಸರ್ಕಾರ ಇದ್ದಾಗಲೂ ಸರಿಯಾಗಿ ನಡೆಸಿಕೊಂಡಿಲ್ಲ. ಸರ್ಕಾರ ಹೋದ ಮೇಲೂ ಸರಿಯಾಗಿ ನಡೆಸಿಕೊಂಡಿಲ್ಲ. ಕಳೆದ ವಾರ ನಡೆದ ಮಾಧ್ಯಮ ಸಂವಾದದಲ್ಲಿ, ಅವರ ರೋಗ ಏನು ಅಂತ ಹೇಳಿಕೊಂಡರೆ ತಾನೆ ಚಿಕಿತ್ಸೆ ನೀಡುವುದಕ್ಕೆ ಸಾಧ್ಯ ಅಂತ ಕಿಚಾಯಿಸಿದ್ದರು. ಇಂತಹ ಹೇಳಿಕೆ ಕೊಟ್ಟರೆ ಹೇಗೆ ಎಂದು ಗುಡುಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ನೀವು ಸಮಾಧಾನ ಮಾಡುತ್ತೀರಾ. ಎಚ್.ಡಿ.ಕುಮಾರಸ್ವಾಮಿ ಬೈತಾರೆ. ಹೀಗಿದ್ದರೆ ನಾವು ಹೇಗೆ ನಿಮ್ಮ ಜೊತೆ ಇರುವುದು ಎಂದು ಪರಿಷತ್ ಸದಸ್ಯರು ದೇವೇಗೌಡ ಅವರ ಮುಂದೆ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

HDK

ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಿಗಮ ಮಂಡಳಿ ಸ್ಥಾನ ಕೇಳಿದ್ದೇವು. ಆದರೆ ಅವರು ಕೊಡಲಿಲ್ಲ. ವರ್ಗಾವಣೆಗಾಗಿ ನಾವು ಮಾಡಿದ್ದ ಶಿಫಾರಸುಗಳನ್ನ ಅಧಿಕಾರಿಗಳು ಮಾಡಿಕೊಟ್ಟಿಲ್ಲ. ಈ ಬಗ್ಗೆ ಮಾತನಾಡುವುದಕ್ಕೆ ಕುಮಾರಸ್ವಾಮಿ ಅವರು ನಮಗೆ ಸಮಯನ್ನೇ ಕೊಡಲಿಲ್ಲ. ನಾವು ಪಕ್ಷಕ್ಕಾಗಿ ದುಡಿದಿಲ್ಲವೇ? ಸರ್ಕಾರ ಇದ್ದಾಗ ನಮ್ಮನ್ನ ದೂರ ಇಟ್ಟರು, ನಮ್ಮ ಸಮಸ್ಯೆಯನ್ನೆ ಕೇಳಿಲ್ಲ. ಕಾಂಗ್ರೆಸ್ ಸಚಿವರು ನಮ್ಮ ಕೆಲಸಗಳನ್ನ ಮಾಡಿಕೊಡಲಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಗಮನಕ್ಕೆ ತಂದರೂ ಏನು ಪ್ರಯೋಜನವಾಗಲಿಲ್ಲ. ಹೀಗಿದ್ದರೆ ನಾವು ಹೇಗೆ ಪಕ್ಷದ ಜೊತೆ ಇರಬೇಕು ಹೇಳಿ. ಪಕ್ಷದ ಕಾರ್ಯಕರ್ತರಿಗೆ ಯಾವುದೇ ಹುದ್ದೆ ನೀಡಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ವಿಧಾನ ಪರಿಷತ್ ಸದಸ್ಯರ ತರಾಟೆಯಿಂದ ಹೆಚ್ಚೆತ್ತುಕೊಂಡ ಎಚ್.ಡಿ.ಕುಮಾರಸ್ವಾಮಿ ಅವರು, ನನ್ನಿಂದ ತಪ್ಪು ಆಗಿದ್ದರೆ, ನಿಮ್ಮ ಮನಸ್ಸು ನೊಂದಿದ್ದರೆ ಕ್ಷಮೆ ಕೋರುತ್ತೇನೆ. ನಾನು ಸಿಎಂ ಆಗಿದ್ದಾಗ 24 ಗಂಟೆಯೂ ಒತ್ತಡದಲ್ಲಿ ಇರುತ್ತಿದ್ದೆ. ಶಾಸಕರು, ಸಚಿವರು ಮತ್ತು ಅಧಿಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿತ್ತು. ಈ ಸಂದರ್ಭದಲ್ಲಿ ನಿಮ್ಮನ್ನು ಕಡೆಗಣನೆ ಮಾಡಿದ್ದರೆ ಇದಕ್ಕೆ ಕ್ಷಮೆ ಕೋರುತ್ತೇನೆ. ಮುಂದೆ ಎಚ್.ಡಿ.ದೇವೇಗೌಡರ ಅಣತಿಯಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಅಂತ ಕೇಳಿದರು ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

HDD JDS

ಈ ವೇಳೆ ಮಧ್ಯೆ ಪ್ರವೇಶಿಸಿ ಎಲ್ಲರನ್ನೂ ಕೈ ಮುಗಿದು ಕೇಳಿಕೊಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಣ್ಣ ಮನಸ್ತಾಪದಿಂದ ನಾವು ಪ್ರಾದೇಶಿಕ ಪಕ್ಷವನ್ನು ಹಾಳು ಮಾಡುವುದು ಬೇಡ. ನಮ್ಮನ್ನು ನಂಬಿ ಸಾವಿರಾರು ಕಾರ್ಯಕರ್ತರು ಇದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಾನು ಬುದ್ಧಿ ಹೇಳುತ್ತೇನೆ. ಮುಂದೆ ಹೀಗೆ ಆಗದಂತೆ ನಾನು ಭಾಷೆ ಕೊಡುತ್ತೇನೆ ಎಂದು ಸಭೆಯಲ್ಲಿ ಭಾವುಕರಾದರು.

ಎಚ್.ಡಿ.ದೇವೇಗೌಡ ಅವರ ಮಾತಿಗೆ ಹಾಗೂ ಎಚ್.ಡಿ.ಕುಮಾರಸ್ವಾಮಿ ಕ್ಷಮೆಗೆ ಬೆಲೆ ನೀಡಿ ಪಕ್ಷದ ಸಂಘಟನೆಗೆ ಮುಂದಾಗುತ್ತೇವೆ ಎಂದು ವಿಧಾನಸಭೆಯ ಜೆಡಿಎಸ್ ಸದಸ್ಯರು ಪ್ರಮಾಣ ಮಾಡಿದರು. ಈ ಮೂಲಕ ಸಂಧಾನ ಸಭೆ ಸಫಲವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *