ಚಿಕ್ಕಬಳ್ಳಾಪುರ: ಜೆಡಿಎಸ್ ಶಾಸಕರ ರೆಸಾರ್ಟ್ ವಾಸ್ತವ್ಯ ಇಂದಿಗೆ ಅಂತ್ಯಗೊಳ್ಳಲಿದೆ. ಅತೃಪ್ತ ಶಾಸಕರು ಸಾಲುಸಾಲು ರಾಜೀನಾಮೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಸಿಎಂ ತಮ್ಮ ಪಕ್ಷದ ಶಾಸಕರಿಗೆ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲು ಹೇಳಿದ್ದರು. ಹಾಗಾಗಿ ಶಾಸಕರು ರೆಸಾರ್ಟ್ ನಲ್ಲಿ ತಂಗಿದ್ದರು.
ಜೆಡಿಎಸ್ ಶಾಸಕರು ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಬಳಿ ಇರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ತಂಗಿದ್ದರು. ಜೆಡಿಎಸ್ ಶಾಸಕರು ಇಂದು ಬೆಳಗ್ಗೆ 11 ಗಂಟೆಗೆ ರೆಸಾರ್ಟ್ ನಿಂದ ನೇರವಾಗಿ ವಿಧಾನಸೌಧ ಕಲಾಪಕ್ಕೆ ತೆರಳಲಿದ್ದಾರೆ.
ಕಲಾಪಕ್ಕೆ ಶಾಸಕರನ್ನು ಕರೆದೊಯ್ಯಲು ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಸದ್ಯ ಶಾಸಕರು ಬೆಳಗ್ಗಿನ ತಿಂಡಿ ಮುಗಿಸಿ ತಮ್ಮ ಲಗೇಜ್ ಪ್ಯಾಕ್ ಮಾಡಿಕೊಳ್ಳುತ್ತಿದ್ದಾರೆ. ಸುಮಾರು 11 ಗಂಟೆಗೆ 26 ಶಾಸಕರು ವಿಧಾನಸೌಧದತ್ತ ಪ್ರಯಾಣ ಬೆಳೆಸಲಿದ್ದಾರೆ.
ರೆಸಾರ್ಟಿನಲ್ಲಿದ್ದ ಜೆಡಿಎಸ್ ಶಾಸಕರು ಫುಲ್ ರಿಲ್ಯಾಕ್ಸ್ ಮೂಡ್‍ನಲ್ಲಿ ಇದ್ದರು. ಅಲ್ಲದೆ ವಿಶೇಷ ಯೋಗ ಟೀಚರ್ ಮೂಲಕ ಯೋಗ ಹಾಗೂ ವಾಕಿಂಗ್ ಮಾಡಿ ವಿಶ್ರಾಂತಿ ಪಡೆದಿದ್ದರು.
ಜೆಡಿಎಸ್ ಶಾಸಕರಾದ ಬಂಡೆಪ್ಪ ಕಾಶಂಪೂರ್, ನಾಡಗೌಡ, ಟಿ.ಎ.ಶರವಣ, ಸೇರಿದಂತೆ ಬಹುತೇಕ ಶಾಸಕರು ಯೋಗಾಭ್ಯಾಸ ಮಾಡಿದ್ದಾರೆ. ಶಾಸಕರು ತಂಗಿದ್ದ ರೆಸಾರ್ಟಿಗೆ ಪೊಲೀಸ್ ಸರ್ಪಗಾವಲು ಹಾಕಿದ್ದು, ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿತ್ತು.