– ಮಂಡ್ಯ ಅಳಿಯ ಆಗ್ತಾರಾ ನಿಖಿಲ್?
ಮಂಡ್ಯ: ಲೋಕಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಅವರು ಅಧಿಕೃತ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡುವ ಸಂದರ್ಭದಲ್ಲೇ ಅವರ ಮದುವೆ ಬಗ್ಗೆಯೂ ಜೆಡಿಎಸ್ ಶಾಸಕ ಪರೋಕ್ಷವಾಗಿ ಮಾಹಿತಿ ನೀಡಿದ್ದಾರೆ.
ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಿದ್ದ ನಾಗಮಂಗಲ ಶಾಸಕ ಸುರೇಶ್ ಗೌಡ ಅವರು, ನಿಮ್ಮ ನಿಮ್ಮ ಬೂತ್ ಗಳಲ್ಲಿ ಕೆಲಸ ಆರಂಭಿಸಿ. ಯಾರು ಏನು ಟೀಕೆ ಮಾಡಿದರೂ ಸಂತೋಷವಾಗಿ ಸ್ವೀಕರಿಸಿ ಚುನಾವಣೆಯಲ್ಲಿ ಉತ್ತರ ಕೊಡುತ್ತೇವೆ. ಮಂಡ್ಯ ಜಿಲ್ಲೆಯ ಜೆಡಿಎಸ್ ಕಟ್ಟಾಳುಗಳು ಯಾವ ರೀತಿ ಇದ್ದಾರೆ ಎಂಬುದನ್ನು ಮತ ನೀಡಿ ಸಾಬೀತು ಪಡಿಸಬೇಕಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಇದೇ ವೇಳೆ ವೇದಿಕೆ ಮೇಲಿದ್ದ ನಿಖಿಲ್‍ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ನಿಖಿಲ್ ಬೇರೆಯಲ್ಲ ನಮ್ಮ ಮನೆಯ ಮಗ, ನಾಳೆ ಅಳಿಯ ಆದರೂ ಆಗಬಹುದು ಎಂದರು. ಈ ಮೂಲಕ ಪರೋಕ್ಷವಾಗಿ ನಿಖಿಲ್ ಮಂಡ್ಯದ ಯುವತಿಯನ್ನು ಮದುವೆಯಾಗುತ್ತಾರೆ ಎಂದು ಶಾಸಕ ಸುರೇಶ್‍ಗೌಡ ಸುಳಿವು ನೀಡಿದ್ರು.
ಈಗಾಗಲೇ ರೇವಣ್ಣ ಅವರ ಮಕ್ಕಳು ಮಂಡ್ಯದ ಅಳಿಯರಾಗಿದ್ದಾರೆ. ಇವರು ಕೂಡ ಮುಂದೆ ಇಲ್ಲಿನ ಅಳಿಯ ಆಗಬಹುದು. ಇವರನ್ನು ನಾವು ನೆರೆಯ ಆಂಧ್ರ, ತಮಿಳುನಾಡಿನಿಂದ ಕರೆತಂದಿಲ್ಲ. ಇಲ್ಲಿನ ಮಗ ಆಗಿದ್ದಾರೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.
ನಿಖಿಲ್ ವಿರುದ್ಧ ಮದುವೆಯ ವಿಚಾರವನ್ನೇ ಪ್ರಸ್ತಾಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಪಪ್ರಚಾರ ನಡೆಸಿದ್ದರು. ಸದ್ಯ ವೇದಿಕೆಯಲ್ಲೇ ಮದುವೆ ವಿಚಾರ ಪ್ರಸ್ತಾಪ ಮಾಡುವ ಮೂಲಕ ಶಾಸಕರು ತಿರುಗೇಟು ನೀಡಿದ್ದಾರೆ. ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು ಕೂಡ ಒಗಟ್ಟಿನ ಮಂತ್ರ ಜಪಿಸಿ ನಿಖಿಲ್ ಗೆಲುವಿಗೆ ಶ್ರಮಿಸಬೇಕು ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv