– ಕಮಲದಲ್ಲಿ ಬಿಗಿಯಾದ ಹೈಕಮಾಂಡ್ ಇದೆ
– ನಾನು ಎಚ್‍ಡಿಕೆಯ ಆಪ್ತ ಎಂದು ಹೇಳಿದ್ದು ಯಾವಾಗ?
– ಮಾಜಿ ಸಿಎಂ ವಿರುದ್ಧ ಶ್ರೀನಿವಾಸ್ ಅಸಮಾಧಾನ
ತುಮಕೂರು: ಮಾಜಿ ಸಚಿವ ಜಿ.ಟಿ.ದೇವೇಗೌಡ ಆಯ್ತು, ಈಗ ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಅವರು ಬಿಜೆಪಿಯನ್ನು ಹಾಡಿ ಹೊಗಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬಿಜೆಪಿ ಸರ್ಕಾರಕ್ಕೆ ಫುಲ್ ಅಂಕವನ್ನು ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅವಧಿ ಪೂರೈಸುವುದು ನೂರಕ್ಕೆ ನೂರು ಖಚಿತ ಎಂದರು. ನಮ್ಮ ಪಕ್ಷದ ರೀತಿ ಬಿಜೆಪಿಯಲ್ಲಿ ಅತೃಪ್ತರು ಕಿತ್ತಾಡುವುದು, ರಾಜೀನಾಮೆ ನೀಡುವುದು ನಡೆಯಲ್ಲ. ಬಿಜೆಪಿಯವರಿಗೆ ಅವರದ್ದೇ ಆದ ಸಿದ್ದಾಂತ, ಶಿಸ್ತು ಇದೆ. ಅವರ ಹೈಕಮಾಂಡ್ ಬಿಗಿಯಾಗಿದೆ. ಆದ್ದರಿಂದ ಬಿಜೆಪಿ ಸಂಪೂರ್ಣ ಅವಧಿ ಮಗಿಸಲಿದೆ. ನಾನು ಎಲ್ಲವನ್ನೂ ತಿಳಿದುಕೊಂಡೇ ಹೇಳುತ್ತಿದ್ದೇನೆ. ಬೇರೆ ಪಕ್ಷಕ್ಕೂ ಬಿಜೆಪಿಗೂ ಹೋಲಿಕೆ ಮಾಡಬೇಡಿ ಎಂದು ಬಿಜೆಪಿ ಪರ ಬ್ಯಾಟಿಂಗ್ ಮಾಡಿದರು. ಇದನ್ನೂ ಓದಿ:ಪಕ್ಷ ತೊರೆಯಲು ಸಿದ್ಧರಾದ 6 ಜೆಡಿಎಸ್ ಶಾಸಕರು
ಬಿಗಿಯಾದ ಹೈ ಕಮಾಂಡ್ ಇರುವುದರಿಂದ ಅವರು ಹೇಳಿದ ರೀತಿಯಲ್ಲಿ ರಾಜ್ಯದಲ್ಲಿ ನಡೆಯುತ್ತಿದೆ. ಆರಂಭದಲ್ಲಿ ಅಸಮಾಧಾನ ಹೊರಹಾಕಿದ್ದ ಸಿ.ಟಿ.ರವಿ, ಉಮೇಶ್ ಕತ್ತಿ, ಆರ್ ಅಶೋಕ್ ಈಗ ಬಾಲ ಮುದುಡಿಕೊಂಡು ಸುಮ್ಮನಾಗಿಲ್ಲವೇ? ಹೀಗಾಗಿ ಬಿಜೆಪಿ ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದರು. ಜೆಡಿಎಸ್ ನಾಯಕನ ಈ ಹೇಳಿಕೆ ಈಗ ತೀವ್ರ ಸಂಚಲನ ಮೂಡಿಸಿದ್ದು, ಜಿ.ಟಿ ದೇವೇಗೌಡರ ರೀತಿ ಬಿಜೆಪಿಯತ್ತ ಶ್ರೀನಿವಾಸ್ ಅವರು ಕೂಡ ಮುಖ ಮಾಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಇತ್ತ ಬಿಜೆಪಿಯನ್ನು ಹೊಗಳುತ್ತ ಅತ್ತ ಜೆಡಿಎಸ್ ಪಕ್ಷದ ವಿರುದ್ಧ ಮತ್ತೆ ಶ್ರೀನಿವಾಸ್ ಅವರು ಅಸಮಾಧಾನವನ್ನು ಹೊರಹಾಕಿದ್ದಾರೆ. ಪಕ್ಷದ ನಡವಳಿಕೆಯಿಂದ ನನಗೆ ಬೇಜಾರಾಗಿದೆ. ಮುಂದಿನ ದಿನದಲ್ಲಿ ಎಲ್ಲವನ್ನು ಹೇಳುತ್ತೇನೆ. ತನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲ. ಯಾಕೆ ಕೊಟ್ಟಿಲ್ಲ ಎಂದು ಕುಮಾರಸ್ವಾಮಿಗೆ ಗೊತ್ತು. ಮೈತ್ರಿ ಸರ್ಕಾರ ಉಳಿಸಿಕೊಳ್ಳಬಹುದಿತ್ತು. ಆದರೆ ಎಚ್‍ಡಿಕೆ ಅವರ ನಡವಳಿಕೆ ಮುಖ್ಯವಾಗಿತ್ತು. ಆ ಸಂದರ್ಭದಲ್ಲಿ ಅವರು ಸರಿಯಾಗಿ ನಡೆದುಕೊಂಡಿಲ್ಲ. ಹಾಗಂತ ದೇವೇಗೌಡರು ಪಕ್ಷ ಕಟ್ಟುವ ಕೆಲಸ ನಿರಂತರ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ:ಅತ್ಯಂತ ಕೆಳಮಟ್ಟದ ಮಾನಸಿಕತೆ ಇರುವ ವ್ಯಕ್ತಿ ಸಿಎಂ ಆಗಿದ್ದಕ್ಕೆ ಕನಿಕರ ಆಗ್ತಿದೆ – ಸುರೇಶ್‍ಕುಮಾರ್
ಕುಮಾರಸ್ವಾಮಿ ಅವರ ಬಗ್ಗೆ ನಾನು ಏನು ಹೇಳುವುದಿಲ್ಲ. ಅವರು ದೊಡ್ಡ ನಾಯಕರು ಎಂದು ವ್ಯಂಗ್ಯವಾಡಿದರು. ಈ ಹೇಳಿಕೆಗಳ ಮೂಲಕ ಪರೋಕ್ಷವಾಗಿ ಕುಮಾರಸ್ವಾಮಿ ಅವರ ನಡವಳಿಕೆ ಸರಿ ಇಲ್ಲ ಎಂದು ಶ್ರೀನಿವಾಸ್ ಅಸಮಾಧಾನ ಹೊರಹಾಕಿದ್ದಾರೆ. ಹಾಗೆಯೇ ನಾನು ಕುಮಾರಸ್ವಾಮಿ ಅವರ ಆಪ್ತ ಎಂದು ಯಾರು ಹೇಳಿದ್ದು? ನನ್ನ ಮನಸ್ಸಿನಲ್ಲಿರೋದು ಏನು ಎಂದು ನಿಮಗೆ ಹೇಗೆ ಗೊತ್ತಾಗುತ್ತದೆ? ಎದುರಿಗೆ ನಗುತ್ತಾ ಮಾತಾನಾಡುತ್ತೇವೆ, ಸಿಕ್ಕಿದಾಗಲೆಲ್ಲಾ ಚೆನ್ನಾಗಿ ಮಾತಾನಾಡುತ್ತೇವೆ ಎಂದರೆ ಅವರ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ ಎಂದು ಹೇಗೆ ಹೇಳುತ್ತೀರಾ ಎಂದು ಪ್ರಶ್ನಿಸುವ ಮೂಲಕ ತಾವು ಕುಮಾರಸ್ವಾಮಿಗೆ ಆಪ್ತ ಅಲ್ಲ ಎಂದು ಶ್ರೀನಿವಾಸ್ ಹೇಳಿದ್ದಾರೆ. ಹಾಗೆಯೇ ಕುಮಾರಸ್ವಾಮಿ ಒಳ್ಳೊಳ್ಳೆ ಸಚಿವ ಸ್ಥಾನ ಕೊಟ್ಟಿದ್ದರು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:ನಾನು ಎಲ್ ಬೋರ್ಡ್ ಎಂದು ತಿಳಿಯಬೇಡಿ: ಎಚ್‍ಡಿಕೆಗೆ ಸೋಮಣ್ಣ ಟಾಂಗ್
ನಾನು 7 ಜನರೊಂದಿಗೆ ಬಿಜೆಪಿಗೆ ಹೋಗುತ್ತೇನೆ ಅನ್ನುವ ವದಂತಿ ಇದೆ. ಇದು ಸುಳ್ಳು ಸುದ್ದಿ, ಈ ಅವಧಿಯಲ್ಲಿ ಯಾವ ಕಾರಣಕ್ಕೂ ಪಕ್ಷ ತೊರೆಯಲ್ಲ. ವಿಧಾನಸಭೆಯ ಈ ಅವಧಿಯವರೆಗೂ ಪಕ್ಷದಲ್ಲಿ ಇರುತ್ತೇನೆ ಎಂದು ಹೇಳಿ ಬಂದಿದ್ದೇನೆ. ಈ ಸಮಯದಲ್ಲಿ ಪಕ್ಷ ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ. ಅವಧಿ ಬಳಿಕ ರಾಜಕೀಯ ನಿವೃತ್ತಿ ಪಡೆಯಬೇಕು ಎಂದುಕೊಂಡಿದ್ದೇನೆ ಎಂದು ತಿಳಿಸಿದರು.