ಮಂಡ್ಯ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸದ್ಯ ಟೆಂಪಲ್ ರನ್ ಮಾಡುತ್ತಿದ್ದು, ಇಂದು ಮಂಡ್ಯ ಜಿಲ್ಲೆಯಲ್ಲಿನ ದೇಗುಲ ದರ್ಶನಕ್ಕೆ ಬಂದಿದ್ದ ಡಿಕೆಶಿ ಅವರಿಗೆ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಸಾರಥಿಯಾಗಿದ್ದರು.
ಹೌದು, ರವೀಂದ್ರ ಅವರು ತಮ್ಮ ಕಾರಿನಲ್ಲೇ ಡಿಕೆಶಿ ಅವರಿಗೆ ದೇಗುಲ ಯಾತ್ರೆ ಮಾಡಿಸಿ ಸಾರಥಿಯಾಗಿದ್ದಾರೆ. ಅದರಲ್ಲೂ ಸ್ವತಃ ತಾವೇ ಕಾರು ಚಾಲನೆ ಮಾಡಿ, ಕನಕಪುರ ಬಂಡೆಗೆ ದೇಗುಲ ದರ್ಶನ ಮಾಡಿಸಿರುವುದು ವಿಶೇಷವಾಗಿತ್ತು. ಶ್ರೀರಂಗನಾಥ ದೇಗುಲ, ಟಿಪ್ಪು ಮಡಿದ ಸ್ಥಳ, ನಿಮಿಷಾಂಭ ದೇವಿ ದೇವಸ್ಥಾನ ಹೀಗೆ ವಿವಿಧ ಸ್ಥಳಗಳಲ್ಲಿ ಕಾಂಗ್ರೆಸ್ ನಾಯಕನಿಗೆ ಜೆಡಿಎಸ್ ಶಾಸಕ ಸಾಥ್ ನೀಡಿದರು. ಇದನ್ನೂ ಓದಿ:‘ನಿಮ್ಮ ಕತ್ತನ್ನೇ ಹೊಡಿತೀನಿ’ – ಖಡ್ಗ ತೋರಿಸಿ ಅಭಿಮಾನಿಗಳಿಗೆ ಬಿಸಿ ಮುಟ್ಟಿಸಿದ ಡಿಕೆಶಿ
ಜೆಡಿಎಸ್ ಸ್ವಾಗತ, ಬೆಂಬಲ ನೀಡಿದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ನಾವು ಮತ್ತು ಜೆಡಿಎಸ್ ಅವರು ಒಟ್ಟಿಗೆ ಕೆಲಸ ಮಾಡಿದ್ದೇವೆ. ಜೆಡಿಎಸ್ ಮತ್ತು ನಮ್ಮ ಪ್ರೀತಿ ವೈಯಕ್ತಿಕ ವಿಚಾರ. ಪಕ್ಷದ ಸಿದ್ದಾಂತಗಳನ್ನು ಇಬ್ಬರೂ ಒಪ್ಪಿಕೊಳ್ಳುತ್ತೇವೆ. ಜಾತ್ಯಾತೀತ ತತ್ವದ ಬಗ್ಗೆ ಒಪ್ಪಿಕೊಳ್ಳುತ್ತೇವೆ. ನಾವು ಒಟ್ಟಿಗೆ ಕೆಲಸ ಮಾಡಬೇಕಿದೆ. ರಾಜಕೀಯವಾಗಿ ನಮ್ಮ ಇಬ್ಬರ ಪಕ್ಷದಲ್ಲಿ ಬೇಕಾದಷ್ಟು ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಕಾರ್ಯಕರ್ತರು ಪ್ರೀತಿ ಮಾಡವಾಗ ನಾವು ಇಲ್ಲ ಎಂದು ಹೇಳಲು ಆಗುವುದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಹೋಗುವ ಕೆಲಸ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ:ಡಿಕೆಶಿ ಜೊತೆ ಜಿಟಿಡಿ ಚಾಮುಂಡಿ ದರ್ಶನ- ದೇವೇಗೌಡ್ರನ್ನು ನೋಡ್ತಿದ್ದಂತೆ ಎಸ್ಕೇಪ್
ಶ್ರೀರಂಗಪಟ್ಟಣದಲ್ಲಿ ಟಿಪ್ಪು ಮಡಿದ ಸ್ಥಳಕ್ಕೆ ಭೇಟಿ ಕೊಟ್ಟ ಡಿಕೆಶಿ ಅವರನ್ನು ಸ್ಥಳೀಯ ಮುಸ್ಲಿಂ ಮುಖಂಡರು ಪೇಟ, ಕತ್ತಿ ನೀಡಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಡಿಕೆಶಿ ಅವರನ್ನು ನೋಡಲು ಬಂದಿದ್ದ ಅಭಿಮಾನಿಗಳು ಗಲಾಟೆ ಮಾಡುತ್ತಿದ್ದರು. ಆಗ ಡಿಕೆಶಿ ಸುಮ್ಮನಿರಿ ಎಂದು ಮನವಿ ಮಾಡಿದರು. ಆದರೂ ಅವರ ಹಿಂದೆ ನಿಂತಿದ್ದ ಅಭಿಮಾನಿಗಳು ಡಿಕೆಶಿಯನ್ನು ನೋಡಲು ಗಲಾಟೆ ಮಾಡುತ್ತಿದ್ದರು. ಹೀಗಾಗಿ ‘ಏಯ್ ಸುಮ್ನಿರಿ, ಹಿಂಗೇ ಮಾತಾಡ್ತಿದ್ರೆ ನಿಮ್ಮ ಕತ್ತನ್ನೇ ಹೊಡಿತೀನಿ’ ಎಂದು ಕೈಯಲ್ಲಿದ್ದ ಖಡ್ಗ ತೋರಿಸಿ ತಮಾಷೆ ಮಾಡಿದರು.