ಯಾದಗಿರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಅವರೊಂದು ಹೆಣ್ಣು ಹುಲಿ ಇದ್ದಂತೆ ಎಂದು ಗುರುಮಿಠಕಲ್‍ನ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಇಷ್ಟು ದಿನ ಸಿಎಂ ಯಡಿಯೂರಪ್ಪ ನಂಬರ್ 1 ಆಗಿದ್ದರು. ಆದರೆ ಈಗ ನಂಬರ್ 2 ಆಗಿದ್ದಾರೆ. ಬಿಜೆಪಿ ನಿಯಮದ ಪ್ರಕಾರ 70 ವರ್ಷದ ದಾಟಿದ ಹಿರಿಯರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಈ ನಿಟ್ಟಿನಲ್ಲಿ ಬಿಎಸ್ ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿ ಅಂಚಿನಲ್ಲಿದ್ದಾರೆ. ಆದರೆ ಮುಖ್ಯಮಂತ್ರಿ ಅವಧಿ ಪೂರೈಸುವುದಕ್ಕಾಗಿ ಅವರಿಗೆ ಕೇವಲ 5ರಿಂದ 6 ತಿಂಗಳು ಬೋನಸ್ ನೀಡಲಾಗಿದೆ. ಹೀಗಾಗಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ವರ್ಗಾವಣೆ ದಂಧೆಯಲ್ಲಿ ನಿರತರಾಗಿ ಸಾವಿರಾರು ಕೋಟಿ ಗಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ 75 ಕೋಟಿ ರೂ. ವಿಶೇಷ ಅನುದಾನ ಮತ್ತು ಮಠ, ಮಂದಿರಗಳಿಗೆ ಅನುದಾನ ನೀಡಲಾಗಿತ್ತು. ನನಗೂ ಕೂಡ 4.5 ಕೋಟಿ ರೂ. ಅನುದಾನ ಬಂದಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹೈದರಾಬಾದ್ ಕರ್ನಾಟಕ ಭಾಗದ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ಖಾತೆಯಿಂದ ಅನುದಾನದ ಹಣವನ್ನು ಹಿಂಪಡದು ಬಿಜೆಪಿ ಶಾಸಕರಿಗೆ ನೀಡಿದ್ದಾರೆ. ಇದು ಸೇಡಿನ ರಾಜಕಾರನ ಅಲ್ವಾ ಎಂದು ಸಿಎಂ ವಿರುದ್ಧ ಗುಡುಗಿದರು.
ಸಿಎಂ ಯಡಿಯೂರಪ್ಪ ಅವರು ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಬೆಂಬಲವೂ ಇದೆ. ಆದರೆ ಈ ಭಾಗದ ಜೆಡಿಎಸ್-ಕಾಂಗ್ರೆಸ್ ಶಾಸಕರಿಗೆ ನೀಡಿದ್ದ ವಿವಿಧ ಅನುದಾನದ 75 ಕೋಟಿ ರೂ.ವನ್ನು ಹಿಂಪಡೆದಿದ್ದು ಎಷ್ಟು ಸರಿ? ಆ ಹಣವನ್ನು ಬಿಜೆಪಿಯವರಿಗೆ ಕೊಟ್ಟಿದ್ದು ದುರಂತ ಅಲ್ವಾ? ಹೈದರಾಬಾದ್ ಕರ್ನಾಟಕ ಭಾಗದ ವಿಶೇಷ ಅನುದಾನದ ಯಾರಪ್ಪನ ಆಸ್ತಿಯೂ ಅಲ್ಲ. ಅದು ನಮ್ಮ ಭಾಗದ ರೈತರ ತೆರಿಗೆ ಹಣ, ಅದನ್ನು ಯಾಕೆ ಹಿಂಪಡೆಯಲಾಗಿದೆ ಎಂದು ಬಿಎಸ್ ಯಡಿಯೂರಪ್ಪ ಅವರಿಗೆ ಪ್ರಶ್ನಿಸಿದರು.