ಕೋಲಾರ: ರಸ್ತೆ ದುರಸ್ಥಿಗೆ ಆಗ್ರಹಿಸಿ ಸಾರ್ವಜನಿಕರು ನಡೆಸುತ್ತಿದ್ದ ಪ್ರತಿಭಟನೆಯ ಅಹವಾಲು ಸ್ವೀಕರಿಸಲು ಬಂದ ಶಾಸಕರೇ ಪ್ರತಿಭಟನೆಯಲ್ಲಿ ಭಾಗಿಯಾದ ಘಟನೆ ಕೋಲಾರದ ಮಾಲೂರಿನಲ್ಲಿ ನಡೆದಿದೆ.
ಜಿಲ್ಲೆಯ ಮಾಲೂರು ಹೊರ ವಲಯದಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ನೂರಾರು ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಆರಂಭವಾಗಿ ನಾಲ್ಕು ಗಂಟೆಗಳಾದರೂ ಯಾವ ಅಧಿಕಾರಿಗಳು, ನಾಯಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಈ ವೇಳೆ ಮಾಲೂರು ಜೆಡಿಎಸ್ ಶಾಸಕ ಮಂಜುನಾಥ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ರಸ್ತೆ ದುರಸ್ಥಿಗೊಳಿಸುವ ಭರವಸೆ ನೀಡಿದರು.
Advertisement
Advertisement
ಆದರೆ ಶಾಸಕರ ಭರವಸೆಗೆ ತೃಪ್ತರಾಗದ ಪ್ರತಿಭಟನಾಕಾರರು ಪ್ರಶ್ನೆಗಳ ಸುರಿಮಳೆಗೈದರು. ಈ ವೇಳೆ ಪ್ರತಿಭಟನಾಕಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲ. ಆದ್ದರಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾಗಿಲ್ಲ ಎಂದು ಜಾರಿಕೊಳ್ಳಲು ಯತ್ನಿಸಿದ್ದರು.
Advertisement
ಶಾಸಕರ ಉತ್ತರಕ್ಕೆ ತೃಪ್ತರಾಗದ ಸಾರ್ವಜನಿಕರು ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದರಿಂದ ಶಾಸಕ ಮಂಜುನಾಥ್ ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿ ಕೋಲಾರ ಕಾಂಗ್ರೆಸ್ ಸಂಸದ ಕೆ.ಎಚ್ ಮುನಿಯಪ್ಪ ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಬೇಕು ಎಂದು ಪ್ರತಿಭಟನೆ ನಡೆಸಿದರು. ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮಾಲೂರು – ಹೊಸಕೋಟೆ ಮುಖ್ಯ ರಸ್ತೆ ಸಂಚಾರ ಅಸ್ತವ್ಯಸ್ತವಾಗಿ, ಕಿ.ಮೀ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತ್ತಿದ್ದವು.