ಬೆಂಗಳೂರು: ಕೋಲಾರದ ಜೆಡಿಎಸ್ ಶಾಸಕ ಕೆ.ಶ್ರೀನಿವಾಸ ಗೌಡ ಇಂದು ದಿಢೀರ್ ಅಂತಾ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿಗೆ ಕಾರಣರಾದರು. ಜೆಡಿಎಸ್ ವರಿಷ್ಠರು ತಮ್ಮೆಲ್ಲಾ ಶಾಸಕರನ್ನು ರೆಸಾರ್ಟಿನಲ್ಲಿರಿಸಿದ್ದಾರೆ. ಕೆ.ಶ್ರೀನಿವಾಸ ಗೌಡರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಅವಸರವಾಗಿ ಹೋಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಜೆಡಿಎಸ್‍ಗೆ ಕೈ ಕೊಟ್ಟು ಶಾಸಕರು ಮುಂಬೈನತ್ತ ಪ್ರಯಾಣ ಬೆಳೆಸಿದ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ನಡುವೆ ಶಾಸಕರು ಸಹಕಾರಿ ಸಂಘದ ಸದಸ್ಯರಾಗಿದ್ದು, ದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಭಾಗಿಯಾಗಲು ತೆರಳಿದ್ದಾರೆ ಎನ್ನಲಾಗುತ್ತಿದೆ. ಮಾಧ್ಯಮಗಳ ಪ್ರಶ್ನೆಗೆ ಕಿಡಿಕಾರಿದ ಶಾಸಕರು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.
ಇತ್ತ ಮುಂಬೈನಲ್ಲಿ ಉಳಿದುಕೊಂಡಿರುವ ನಾಯಕರು ಇಂದು ಸಂಜೆಯೊಳಗೆ ಮತ್ತೆ ಕೆಲ ಶಾಸಕರು ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಮುಂಬೈಗೆ ತೆರಳಿರುವ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್, ನನ್ನ ಗೆಳೆಯರನ್ನು ಭೇಟಿಯಾಗದೇ ಇಲ್ಲಿಂದ ತೆರಳಲ್ಲ ಎಂದು ಹೋಟೆಲ್ ಮುಂಭಾಗದಲ್ಲಿಯೇ ಕುಳಿತಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಜೆಡಿಎಸ್ ಶಾಸಕರಾದ ಜಿ.ಟಿ.ದೇವೇಗೌಡ ಮತ್ತು ಶಿವಲಿಂಗೇಗೌಡ ಸಾಥ್ ನೀಡಿದ್ದಾರೆ.