Bengaluru City

ಮಿಷನ್ 123 ಜೆಡಿಎಸ್‌ನ ಛಲ- ಕುಮಾರಸ್ವಾಮಿ

Published

on

Share this

ಬೆಂಗಳೂರು: ಮಿಷನ್ 123 ಎನ್ನುವುದು ನಮ್ಮ ಗುರಿ ಮಾತ್ರವಲ್ಲ, ಛಲವೂ ಹೌದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.‌ ಬಿಡದಿಯ ತೋಟದಲ್ಲಿ ಜನತಾ ಪರ್ವ 1.O ಹಾಗೂ ಮಿಷನ್ 123 ಕಾರ್ಯಾಗಾರದ ನಾಲ್ಕನೇ ದಿನ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಿಗದಿತ ಗುರಿ ಮುಟ್ಟಲು 224 ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತೇವೆ ಎಂದರು.

ಜನತೆಗೆ ನಾವು ವಾಗ್ದಾನ ಮಾಡುತ್ತಿರುವ ಪಂಚರತ್ನ ಕಾರ್ಯಕ್ರಮಗಳ ಮಾಹಿತಿಯನ್ನು ಮನೆ ಮನೆಗೂ ತಲುಪಿಸಲಾಗುವುದು. ಈ ನಿಟ್ಟಿನಲ್ಲಿ ಜೆಡಿಎಸ್ ಪರಿವಾರ ಮುಂದಿನ ಹದಿನೇಳು ತಿಂಗಳ ಕಾಲ ರಾಜ್ಯದ ಉದ್ದಗಲಕ್ಕೂ ಅವಿಶ್ರಾಂತವಾಗಿ ಕೆಲಸ ಮಾಡಲಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.

ಜೆಡಿಎಸ್‌ ಸದಸ್ಯತ್ವಕ್ಕೆ App..!: ಜನರ ಮನ – ಮನೆ ಮುಟ್ಟುವ ನಿಟ್ಟಿನಲ್ಲೇ ಈಗಾಗಲೇ ಎಲ್ಲ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧ ಮಾಡಿಕೊಂಡಿದ್ದೇವೆ. ಮುಖ್ಯವಾಗಿ ಹೊಸ ತಲೆಮಾರಿನ ಯುವಜನರಿಗೆ ಪಕ್ಷದ ಬಗ್ಗೆ ವಿಶ್ವಾಸ ತುಂಬುವ ಪ್ರಯತ್ನವನ್ನು ದೊಡ್ಡ ಮಟ್ಟದಲ್ಲಿ ಮಾಡಲಾಗುವುದು. ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಪಕ್ಷದ ಸದಸ್ಯತ್ವ ಪಡೆಯಲು ಯಾರೂ ಎಲ್ಲೂ ಹೋಗಬೇಕಿಲ್ಲ. ಇದ್ದ ಜಾಗದಲ್ಲಿಯೇ ಸದಸ್ಯತ್ವ ಪಡೆಯಲು ಆ್ಯಪ್ ಸಿದ್ಧ ಮಾಡಲಾಗುತ್ತಿದೆ. ಆದಷ್ಟು ಬೇಗ ಈ ಆ್ಯಪ್ ಬಳಕೆಗೆ ಸಿಗಲಿದೆ. ಯಾರು ನಮ್ಮ ಪಕ್ಷದ ಸದಸ್ಯರಾಗುತ್ತರೋ ಅವರ ಕುಟುಂಬಕ್ಕೆ ಐಡೆಂಟಿಟಿ‌ ಕಾರ್ಡ್ ಕೊಡುತ್ತೇವೆ. ಇದಕ್ಕೆಲ್ಲ ಆಧುನಿಕ ತಂತ್ರಜ್ಞಾನ ಉಪಯೋಗಿಸುತ್ತೇವೆ. ಹೀಗೆ ಸದಸ್ಯತ್ವ ಪಡೆದವರಿಗೆ ಸದಸ್ಯರ ನಿಧಿ ಸೌಲಭ್ಯ ಇಡಲಾಗುತ್ತದೆ. ಉತ್ತಮವಾಗಿ ಓದುವ ಸದಸ್ಯರ ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತೇವೆ. ಅಲ್ಲದೆ ಸದಸ್ಯರ ಮನೆಯಲ್ಲಿ ಸಮಸ್ಯೆ, ಅವಘಡಗಳಾದರೆ ಅಂತವರಿಗೂ ಆರ್ಥಿಕ‌ ನೆರವು ಕೊಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ನಿಖಿಲ್-ಪ್ರಜ್ವಲ್ – ಪಕ್ಷ ಕಟ್ಟಲು ಪಣತೊಟ್ಟ ಸಹೋದರರು

ಅಭ್ಯರ್ಥಿಯಾಗ ಬಯಸುವವರಿಗೆ 3 ತಿಂಗಳ ಗಡುವು: ಇನ್ನು ಮುಂದೆ ಪಕ್ಷದ ಎಲ್ಲಾ ಘಟಕಗಳು ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತವೆ. ಹೊಸಬರನ್ನು ಪಕ್ಷಕ್ಕೆ ಕರೆತರುವುದು ಇರಬಹುದು ಅಥವಾ ಮನವೊಲಿಕೆ ಇರಬಹುದು. ಇವೆಲ್ಲವೂ ನಿತ್ಯ ಕಾರ್ಯಕ್ರಮ ಆಗಬೇಕು. ಪ್ರತಿ ಜಿಲ್ಲೆಯಲ್ಲೂ ಪಕ್ಷದ ವ್ಯವಸ್ತೆಯನ್ನು ಚುರುಕು ಮಾಡುತ್ತೇವೆ. ಯುವಕರಿಗೆ ಜವಾಬ್ದಾರಿ ನೀಡುತ್ತಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ನಾಲ್ಕು ದಿನದ ಕಾರ್ಯಗಾರದಿಂದ ಪಕ್ಷದ ನಾಯಕರಲ್ಲಿ ಕಾರ್ಯಕರ್ತರಲ್ಲಿ ಹುರುಪು ಬಂದಿದೆ. ಎಲ್ಲರಿಗೂ ಗೆಲ್ಲಲೇ ಬೇಕೆಂಬ ಛಲ ಬಂದಿದೆ. ಅಭ್ಯರ್ಥಿಗಳಾಗಬೇಕು ಎಂದು ಗುರುತಿಸಲಾಗಿರುವ ಎಲ್ಲರಿಗೂ ಮೂರು ತಿಂಗಳ ಗಡುವು ನೀಡಲಾಗಿದೆ. ನಾವು ಶಾಸಕರಾಗಬೇಕು ಅಂತ ಹುಮ್ಮಸ್ಸು ಅವರಿಗೆ ಬಂದಿದೆ. ಯುವ ಜನತಾದಳದ ಕಾರ್ಯಕ್ರಮದಲ್ಲೂ ಹುಮ್ಮಸ್ಸು ನೋಡ್ತಾ ಇದ್ದೇವೆ ಎಂದು ವಿವರಿಸಿದರು.

ನಿಖಿಲ್‌ – ಪ್ರಜ್ವಲ್‌ ಜೊತೆ ಜೊತೆಯಲಿ.!: ಪಂಚರತ್ನ ಕಾರ್ಯಕ್ರಮ ತರಲು ತೀರ್ಮಾನ ಮಾಡಿರುವುದು, ಆ ಬಗ್ಗೆ ನಾಲ್ಕೂ ದಿನ ಮಾಹಿತಿ ನೀಡಿದ್ದೇನೆ. ಇದನ್ನು ಜನತೆ ಮುಂದೆ ತೆಗೆದುಕೊಂಡು‌ ಹೋದರೆ ಜನತೆ ನಮಗೆ ಬೆಂಬಲ ನೀಡ್ತಾರೆ ಅನ್ನುವ ಭರವಸೆ ಇದೆ ಎಂದ ಕುಮಾರಸ್ವಾಮಿ, ಪ್ರತಿ ತಾಲೂಕು, ಹೋಬಳಿ, ಹಳ್ಳಿ ಮಟ್ಟದಲ್ಲೂ ಕಾರ್ಯಕ್ರಮ ಮಾಡುತ್ತೇವೆ ಅಂತ ತಿಳಿಸಿದರು. ಇದಕ್ಕೆ ಪೂರಕವಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಅವರಿಬ್ಬರೂ ಜೊತೆಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ. ಯುವ ಪಡೆ ಕಟ್ಟಲು ಹೇಳಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಅಧಿಕಾರಕ್ಕೆ ಬಂದ್ರೆ ಮಹಿಳೆಯರ ಸಾಲ ಮನ್ನಾ ಮಾಡಿ – ಹೆಚ್‍ಡಿಕೆಗೆ ಪತ್ನಿ ಅನಿತಾ ಸಲಹೆ

ಈಗಾಗಲೇ ನೀರಾವರಿ ಯೋಜನೆಗಳ ಬಗ್ಗೆಯೂ ಪಕ್ಷದ ಕಾರ್ಯಗಾರದಲ್ಲಿ ಚರ್ಚೆ ಮಾಡಿದ್ದೇವೆ. ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಬಗ್ಗೆ ಸಮಗ್ರ ಅಭಿವೃದ್ಧಿ ಬಗ್ಗೆ ನಮ್ಮದೇ ಪರಿಕಲ್ಪನೆ ಇದೆ. ನೀರಾವರಿ ಯೋಜನೆಗಳು ಎಂದರೆ ಹಣ ಲೂಟಿ ಹೊಡೆಯುವ ಯೋಜನೆಗಳು ಅಲ್ಲ ಅಂತ ವಿಪಕ್ಷಗಳಿಗೆ ತಿರುಗೇಟು ಕೊಟ್ಟರು. ಮುಂದಿನ ಚುನಾವಣೆಯಲ್ಲಿ ಕೊನೆ ಪಕ್ಷ 30-35 ಮಹಿಳೆಯರಿಗೆ ಅವಕಾಶ ನೀಡಬೇಕು ಎಂದುಕೊಂಡಿದ್ದೇವೆ. ಹಾಗೆಯೇ ಯುವಕರಿಗೆ 25% ಟಿಕೆಟ್ ಕೊಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಆ ಬಗ್ಗೆ ಗಂಭೀರವಾಗಿ ಪರಿಶೀಲನೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications