– ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಪ್ರಧಾನಿ ಹೆಚ್‌ಡಿಡಿ, ಕೇಂದ್ರ ಸಚಿವ ಹೆಚ್‌ಡಿಕೆ
ಬೆಂಗಳೂರು: ಜೆಡಿಎಸ್‌ಗೆ ಬೆಳ್ಳಿ ಹಬ್ಬದ ಸಂಭ್ರಮ. ಜಾತ್ಯತೀತ ಜನತಾ ದಳ ಪಕ್ಷ ಸ್ಥಾಪನೆ ಆಗಿ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಇಂದು ರಜತ ಮಹೋತ್ಸವ ಆಚರಣೆ ಮಾಡಲಾಯಿತು. ಬೃಹತ್ ಸಮಾವೇಶ ಜೆಪಿ ಭವನದಲ್ಲಿ ನಡೆಯಿತು.
ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸೇರಿ ಪಕ್ಷದ ಹಾಲಿ, ಮಾಜಿ ಶಾಸಕರು, ಸಂಸದರು, ಪಕ್ಷದ ನಾಯಕರು ಭಾಗಿಯಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಸೇರಿದ್ದರು.

ರೈತ ಗೀತೆ ಗಾಯನ ಮೂಲಕ ಕಾರ್ಯಕ್ರಮಕ್ಕೆ ಆರಂಭಿಸಲಾಯಿತು. ಜೆಡಿಎಸ್ ಶಾಲು ತಿರುಗಿಸಿ ದೇವೇಗೌಡರು, ನಾಯಕರು, ಕಾರ್ಯಕರ್ತರ ಸಂಭ್ರಮಾಚರಣೆ ಮಾಡಿದರು. ದೀಪ ಬೆಳಗಿ ಸಮಾವೇಶಕ್ಕೆ ದೇವೇಗೌಡ, ಕುಮಾರಸ್ವಾಮಿ ಮತ್ತು ಗಣ್ಯರು ಚಾಲನೆ ನೀಡಿದರು. ಪಕ್ಷದ ಚಿಹ್ನೆಯುಳ್ಳ ಬೆಳ್ಳಿ ನಾಣ್ಯ ಬಿಡುಗಡೆ ಮಾಡಲಾಯಿತು. ಜೆಡಿಎಸ್ ಬಗ್ಗೆ ಮಾಹಿತಿ ಪಡೆಯುವ ವಾಟ್ಸಾಪ್ ಲೈನ್ 9964002028 ನಂಬರ್ ಬಿಡುಗಡೆ ಮಾಡಲಾಯಿತು. ದೇವೇಗೌಡರ ಜೀವನ, ಸಾಧನೆ ಮತ್ತು ಕುಮಾರಸ್ವಾಮಿ ಸಾಧನೆ, ಪಕ್ಷ ನಡೆದು ಬಂದ ಹಾದಿ ಬಗ್ಗೆ ವಿಡಿಯೋ ರಿಲೀಸ್ ಮಾಡಲಾಯಿತು.
ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಧಿವೇಶನದಲ್ಲಿ ಆದ ನಿರ್ಣಯದ ಬಗ್ಗೆ ಸಮಾವೇಶದಲ್ಲಿ ಮಾಹಿತಿ ನೀಡಲಾಯಿತು. ರಾಜ್ಯದಲ್ಲಿ ಪ್ರವಾಹದಿಂದ ಆದ ಬೆಳೆಹಾನಿಗೆ ರಾಜ್ಯ ಸರ್ಕಾರ ಇನ್ನು ಪರಿಹಾರ ಕೊಟ್ಟಿಲ್ಲ. ಕೂಡಲೇ ಪರಿಹಾರ ಕೊಡಬೇಕು. ರೈತರಿಗೆ ಪರಿಹಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ನಿರ್ಣಯ ಅಂಗೀಕರಿಸಲಾಯಿತು. ದೇಶ್ಯಾದ್ಯಂತ ಪಕ್ಷ ಸಂಘಟನೆಯನ್ನ ಮತ್ತಷ್ಟು ಚುರುಕುಗೊಳಿಸುವ ನಿರ್ಣಯ ಅಂಗೀಕಾರ ಮಾಡಲಾಯಿತು. ರಾಷ್ಟ್ರೀಯ ಅಧ್ಯಕ್ಷರಾಗಿ ದೇವೇಗೌಡ ಪುನರ್ ಆಯ್ಕೆ, ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಆಯ್ಕೆ ನಿರ್ಣಯವನ್ನೂ ಸಮಾವೇಶದಲ್ಲಿ ಅಂಗೀಕರಿಸಲಾಯಿತು.
ಪ್ರಚಾರ ಸಮಿತಿ ಅಧ್ಯಕ್ಷ YSV ದತ್ತ ಭಾಷಣ ಮಾಡಿ, ದೇವೇಗೌಡರ ಜತೆ ಸ್ವಯಂ ಸೇವಕನಾಗಿ ನಾನು ಕೆಲಸ ಮಾಡಿಕೊಂಡು ಬಂದಿದ್ದೇನೆ. 25 ವರ್ಷಗಳಲ್ಲಿ ಜೆಡಿಎಸ್ ಅನೇಕ ಕೆಲಸ ಮಾಡಿದೆ. ದೇವೇಗೌಡರದ್ದು ರೈತಪರ ಹೋರಾಟ ಹೆಚ್ಚು. 2 ಸೀಟು ಗೆದ್ದಾಗಲು ರೈತರ ಪರ ಹೋರಾಟ ಮಾಡಿದವರು. ಕಾವೇರಿ ವಿಷಯ ಬಂದಾಗ ಹೋರಾಟ ಮಾಡಿದ್ರು. ಕೃಷ್ಣ ಹೋರಾಟ ಮಾಡಿದವರು ಗೌಡ್ರು. ದೇವೇಗೌಡರು ಪ್ರಧಾನಿ ಆದಾಗ ರೈಲ್ವೆ ಝೋನ್ ಕರ್ನಾಟಕಕ್ಕೆ ಕೊಟ್ಟರು. ಕೃಷ್ಣ, ಕಾವೇರಿಗೆ ಹಣಕಾಸು ಕೊಟ್ಟರು. ಇಡೀ ದೇಶಕ್ಕೆ ನೀರಾವರಿ ಯೋಜನೆ ಜಾರಿ ಮಾಡಿದರು. ಕಬ್ಬು ಬೆಳೆಗಾರರ ಪರ ಧ್ವನಿ ಎತ್ತಿದವರು. ರೈತರ ಪರ ಪಾರ್ಲಿಮೆಂಟ್‌ನಲ್ಲಿ ಧ್ವನಿ ಎತ್ತಿದರು. ಮನಮೋಹನ್ ಸಿಂಗ್, ವಾಜಪೇಯಿ ಬಳಿ ರಾಜ್ಯ ಸಹಕಾರ ಕೋರಿದ್ರು. ರೈಲ್ ಲಗೇಜ್ ಬೋಗಿಯಲ್ಲಿ ಮಲಗಿ ರೈತರ ಕಷ್ಟಕ್ಕೆ ದೆಹಲಿಗೆ ಹೋರಾಟಕ್ಕೆ ಹೋದವರು ದೇವೇಗೌಡರು ಎಂದು ಸಾಧನೆಯನ್ನು ಹಾಡಿ ಹೊಗಳಿದರು.
NDAಗೆ ಸೇರಿದ್ರು ಎಲ್ಲಿದೆ ಜಾತ್ಯತೀತ ಜೆಡಿಎಸ್‌ಗೆ ಅಂತ ಪ್ರಶ್ನೆ ಮಾಡ್ತಾರೆ. ಜಾತ್ಯತೀತ ವ್ಯಕ್ತಿ ದೇವೇಗೌಡರನ್ನ ಬಿಟ್ಟು ರಾಜ್ಯದಲ್ಲಿ ಯಾರೂ ಇಲ್ಲ. ನಿತೀಶ್ ಕುಮಾರ್ 10 ಬಾರಿ ಬೇರೆಯವರ ಜೊತೆ ಸೇರಿ ಸಿಎಂ ಆದರು. ನಿತೀಶ್ ಕುಮಾರ್ ಅವರ ಜಾತ್ಯತೀತತೆ ಪ್ರಶ್ನೆ ಮಾಡೋಕೆ ಆಗುತ್ತಾ? ಅನಿವಾರ್ಯ, ಅಸಹಾಯಕತೆಯಲ್ಲಿ ಪಕ್ಷ ಸಂಘಟನೆಗೆ ನಾವು ಓಆಂ ಜೊತೆ ಹೋಗಿದ್ದೇವೆ. ಎಂಪಿ ಪ್ರಕಾಶ್, ಸಿದ್ದರಾಮಯ್ಯಗೆ ಅವಕಾಶ ಕೊಟ್ಟವರು ದೇವೇಗೌಡರು. ಒಕ್ಕಲಿಗರಿಗೆ ಮೀಸಲಾತಿ ಕಡಿಮೆ ಮಾಡಿ ಕುರುಬ ಸೇರಿ ಹಲವು ಸಮುದಾಯಕ್ಕೆ ಮೀಸಲಾತಿ ಕೊಟ್ಟರು. ಮುಸ್ಲಿಮರಿಗೆ 4% ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ಮುಸ್ಲಿಮರು ದೇವೇಗೌಡರನ್ನ ದಿನಾ ನೆನಪು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ರು. ದೇವೇಗೌಡರ ಹೋರಾಟದ ಛಲ ಕಡಿಮೆ ಆಗಿಲ್ಲ. ಜೆಡಿಎಸ್ ಟ್ರೈನಿಂಗ್ ಕಾಲೇಜು. ಜೆಡಿಎಸ್ ರಾಜಕಾರಣಿಗಳನ್ನ ಬೆಳೆಸುತ್ತದೆ. ಆಮೇಲೆ ಮಾರ್ಕೆಟ್‌ಗೆ ಮಾರಾಟಕ್ಕೆ ನಾವು ಸುಮ್ಮನೆ ಕೂತುಕೊಳ್ತೀವಿ. ದೇವರಾಜ್ ಅರಸ್, ಬಂಗಾರಪ್ಪ, ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ಅನೇಕ ನಾಯಕರು ಪಕ್ಷ ಕಟ್ಟಿದ್ರು. ಯಾರ ಪಕ್ಷವೂ ಉಳಿಯಲಿಲ್ಲ. 25 ವರ್ಷಗಳಿಂದ ಜೆಡಿಎಸ್ ಉಳಿದಿದೆ. ಇದು ದೇವೇಗೌಡರ ಶಕ್ತಿ. ಉತ್ತರ ಭಾರತದಲ್ಲಿ JDU ದಕ್ಷಿಣ ಭಾರತದಲ್ಲಿ ಜೆಡಿಎಸ್ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
