ಶಿವಮೊಗ್ಗ: ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿರುವುದು ಸಂತೋಷ ತಂದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳ ನಾಯಕರು ನನ್ನ ಮೇಲೆ ವಿಶ್ವಾಸವಿಟ್ಟು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಹರಕೆ ಕುರಿ ಅಲ್ಲ ಎಂದು ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಈ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದು ನನ್ನ ಭಾಗ್ಯ. ಚುನಾವಣೆ ಕೇವಲ ಭಾವನಾತ್ಮಕ ಅಲ್ಲ, ರಾಷ್ಟ್ರಮಟ್ಟದ ಉದ್ದೇಶ ಇಟ್ಟುಕೊಂಡು ಸ್ಪರ್ಧಿಸಿದ್ದೇನೆ. ನಾನು ಯಾವುದೇ ಕಾರಣಕ್ಕೂ ಹರಕೆ ಕುರಿಯಲ್ಲ. ಎರಡೂ ಪಕ್ಷಗಳ ವಿಶ್ವಾಸದಿಂದ ಸ್ಪರ್ಧೆಗೆ ನಿಂತಿರುವ ಅಭ್ಯರ್ಥಿಯಾಗಿದ್ದೇನೆ ಎಂದು ತಿಳಿಸಿದರು.
Advertisement
Advertisement
ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ವಿಶ್ವಾಸ ನೀಡಿದ್ದಾರೆ. ಅಲ್ಲದೇ ಈ ಹಿಂದೆ ನಮ್ಮ ತಂದೆ ಬಂಗಾರಪ್ಪ ಅವರ ಸೋಲಿಗೆ ಉತ್ತಮ ಉತ್ತರ ನೀಡುತ್ತೇನೆ. ಆದರೆ ಈ ಹಿಂದೆಯೇ ಕ್ಷೇತ್ರದ ಇತರೇ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆ. ಆದರೆ ಡಿಕೆ ಶಿವಕುಮಾರ್, ಸಿಎಂ ಕುಮಾರಸ್ವಾಮಿ ಅವರ ಮನವಿ ಹಿನ್ನೆಲೆಯಲ್ಲಿ ಇಂದು ಮತ್ತೆ ಸ್ಪರ್ಧೆ ಮಾಡುತ್ತೇನೆ. ಈ ಮೂಲಕ ನಮ್ಮ ತಂದೆಯ ಹಾದಿಯಲ್ಲೇ ನಡೆಯುತ್ತೇವೆ ಎಂದು ತಿಳಿಸಿದರು.
Advertisement
ವಿರೋಧಿ ಪಕ್ಷಗಳ ಟೀಕೆಗಳಿಗೆ ಉತ್ತರಿಸಲು ನಿರಾಕರಿಸಿದ ಅವರು, ನಾನು ಇಲ್ಲಿ ಉತ್ತಮ ರಾಜಕೀಯ ಮಾಡಲು ಬಂದಿದ್ದೇನೆ. ಅಂತಹ ಯಾವುದೇ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಸಹೋದರಿಯಾಗಿ ಗೀತಾ ಶಿವರಾಜ್ ಕುಮಾರ್ ಅವರು ಪ್ರಚಾರ ನಡೆಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಶಿವರಾಜ್ ಕುಮಾರ್ ಅವರು ಆಗಮಿಸಲ್ಲ. ಅವರು ಚಿತ್ರದ ರಂಗದ ನಾಯಕರಾಗಿದ್ದಾರೆ ಎಂದರು.
Advertisement
ಚುನಾವಣೆ ಘೋಷಣೆ ವೇಳೆ ನಾನು ವಿದೇಶದಲ್ಲಿ ಇದ್ದೆ. ಆ ವೇಳೆ ಯಾರೇ ಅಭ್ಯರ್ಥಿ ಅದ್ರೂ ನಾನು ಬೆಂಬಲ ನೀಡುವುದಾಗಿ ತಿಳಿಸಿದ್ದೆ. ಆದರೆ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ಮಾತುಕತೆ ನಡೆಸಿದರು. ಅವರೆಲ್ಲಾ ಮನವಿ ಮಾಡಿದ್ದು ನನಗೆ ಒಂದು ಭಾಗ್ಯ ಎಂದೇ ಹೇಳುತ್ತೇನೆ. ಎಚ್‍ಡಿ ಕುಮಾರಸ್ವಾಮಿ ಅವರು ಸಿಎಂ ಆಗುವುದು ಬಂಗಾರಪ್ಪನವರ ಕನಸು. ಆದರಂತೆ ಇಂದು ಕ್ಷೇತ್ರದಲ್ಲಿ ಉಳಿದಿರುವ ಅವರ ಕನಸು ನನಸು ಮಾಡಲು ಎಲ್ಲರೂ ಒಂದಾಗಿದ್ದಾರೆ. ನನ್ನ ಮೂಲಕ ಶಿವಮೊಗ್ಗ ಉಪಚುನಾವಣೆ ಗೆದ್ದು ಸಮ್ಮಿಶ್ರ ಸರ್ಕಾರ ಮತ್ತಷ್ಟು ಸದೃಢ ಆಗಲಿದೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv