ಸುಕೇಶ್
ಮತ್ತೆ ಪಕ್ಷವನ್ನ ಅಧಿಕಾರಕ್ಕೆ ತರುತ್ತೇನೆ, ಇನ್ನು ಮೂರೂವರೆ ವರ್ಷದಲ್ಲಿ ಬರುವ ಚುನಾವಣೆಗೆ ಈಗಿಂದಲೇ ಪಕ್ಷವನ್ನು ಕಟ್ಟುತ್ತೇನೆ ಅಂತ ದೊಡ್ಡ ಗೌಡರು ಟವೆಲ್ ಕೊಡವಿ ಎದ್ದು ನಿಂತಿದ್ದಾರೆ. ವರ್ಷ ವರ್ಷ ಫೇಲ್ ಆಗುವ ಮಕ್ಕಳನ್ನ ಹಠಕ್ಕೆ ಬಿದ್ದು ಶಾಲೆಗೆ ಕಳುಹಿಸಿ ಮಗ ಪಾಸಾಗುತ್ತಾನೆ ಅಂತ ಹಲಬುವ ಮುಗ್ಧ ತಂದೆಯಂತೆ ಕಾಣುತ್ತಿದ್ದಾರೆ ದೇವೇಗೌಡರು. ಗೌಡರ ಪುತ್ರ ವಾತ್ಸಲ್ಯದ ರಾಜಕಾರಣ ಹೊಸತೇನು ಅಲ್ಲ. ಆದರೆ ದೇವೇಗೌಡರ ಮಕ್ಕಳು ರೇವಣ್ಣ ಹಾಗೂ ಕುಮಾರಸ್ವಾಮಿ ಅಪ್ಪನನ್ನ ಮೀರಿಸುವಂತ ರಾಜಕೀಯ ಚಾಣಾಕ್ಷರಾಗುತ್ತಾರೆ ಅನ್ನೋ ನಿರೀಕ್ಷೆ ಒಂದು ಕಾಲದಲ್ಲಿ ಇತ್ತು. ಆದರೆ ಅಣ್ಣ ತಮ್ಮ ಇಬ್ಬರು ಜೊತೆಗಿದ್ದವರಿಗೆ ಕಾಟ ಕೊಟ್ಟು ಅವರ ಮೇಲೆ ಸವಾರಿ ಮಾಡುತ್ತಾರೆಯೇ ಹೊರತು ದೇವೇಗೌಡರಂತೆ ರಾಜಕೀಯ ಚಾಣಾಕ್ಷರಲ್ಲ ಅನ್ನೋದು ಜಗಜ್ಜಾಹೀರಾಗಿದೆ. ಅವರ ಈ ವರ್ತನೆಯೇ ಈಗ ಪಕ್ಷವನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿದೆ.
Advertisement
ಆದರೂ ದೇವೇಗೌಡರ ಪುತ್ರ ವಾತ್ಸಲ್ಯ ಇನ್ನು ಕಡಿಮೆ ಆದಂತಿಲ್ಲ. 87ರ ಇಳಿ ವಯಸ್ಸಿನಲ್ಲಿ ನಾನು ಮತ್ತೆ ಪಕ್ಷ ಕಟ್ಟುತ್ತೇನೆ. ನನ್ನ ಮಗ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾನೆ ಅನ್ನೋ ತೀರದ ಆಸೆಯೊಂದನ್ನ ಇನ್ನು ಜೀವಂತವಾಗಿಟ್ಟುಕೊಂಡಿದ್ದಾರೆ. ಪಕ್ಷಕ್ಕೆ ಪುನಶ್ಚೇತನ ಕೊಡಲು ಮತ್ತೆ ಸಮಾವೇಶ ನಡೆಸುವ ಮೂಲಕ ಜೆಡಿಎಸ್ ಇನ್ನು ಜೀವಂತವಾಗಿದೆ ಎಂಬುದನ್ನ ತೋರಿಸಲು ಮುಂದಾಗಿದ್ದಾರೆ. ಈ ಇಳಿ ವಯಸ್ಸಿನಲ್ಲಿ ದೇವೇಗೌಡರ ಆಸಕ್ತಿ ಮತ್ತು ಆಶಾ ಭಾವನೆ ಮೆಚ್ಚುವಂತದ್ದೆ. ಆದರೆ ಚಿನ್ನದ ತಟ್ಟೆಯಲ್ಲಿ ಅಧಿಕಾರ ಇಟ್ಟು ಮನೆ ಬಾಗಿಲಿಗೆ ಬಂದು ಕುಮಾರಸ್ವಾಮಿಗೆ ಪಟ್ಟ ಕಟ್ಟಿದ್ದರು ಕಾಂಗ್ರೆಸ್ಸಿಗರು. ಕೈಗೆ ಬಂದ ಅಧಿಕಾರವನ್ನು ಎಡಗಾಲಲ್ಲಿ ಒದ್ದು ಮಾಜಿ ಆದ ಕುಮಾರಸ್ವಾಮಿಗೆ ರಾಜಕಾರಣದಲ್ಲಿ ಆಸಕ್ತಿ ಉಳಿದಂತಿಲ್ಲ.
Advertisement
ತಮ್ಮ ಅಸ್ತಿತ್ವ ಸಾಬೀತಿಗಾಗಿ ಆಗಾಗ ಪತ್ರಿಕಾಗೋಷ್ಠಿ ನಡೆಸಿ ಆಡಬಾರದ ಮಾತನಾಡಿ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಅನ್ನೋ ಘನತೆಯನ್ನು ಮರೆತು ಬಾಯಿಗೆ ಬಂದಂತೆ ಮಾತನಾಡಿ ರಾಜ್ಯದ ಜನ ಅಸಹ್ಯ ಪಡುವಂತೆ ಮಾಡಿಕೊಂಡಿದ್ದಾರೆ. ಇನ್ನೊಂದು ಕಡೆ ದೊಡ್ಡ ಗೌಡರ ಇನ್ನೋರ್ವ ಪುತ್ರ ರೇವಣ್ಣ ಯಾರು ಯಾರಿಗೆ ಹೇಗೆಲ್ಲಾ ಕಾಟ ಕೊಡಬಹುದು ಅನ್ನೋ ಲೆಕ್ಕಾಚಾರದಲ್ಲಿ ಗಳಿಗೆ ಮುಹೂರ್ತ ನೋಡತೊಡಗಿದ್ದಾರೆ ಅನ್ನಿಸುತ್ತದೆ. ಅಧಿಕಾರ ಇರಲಿ ಇಲ್ಲದಿರಲಿ ಇನ್ನೊಬ್ಬರ ಬೆನ್ನು ಬಿದ್ದು ಕಾಟ ಕೊಡುವುದರಲ್ಲಿ ರೇವಣ್ಣ ಪಿಹೆಚ್ ಡಿ ಮಾಡಿದಂತಿದೆ. ರೇವಣ್ಣ ಯಾರಿಗೂ ಕಾಟ ಕೊಡದೆ ತಮ್ಮ ಪಾಡಿಗೆ ತಾವಿದ್ದರೆ ಅದು ಕಾಟ ಕೊಡುವ ಗಳಿಗೆ ಇದಲ್ಲ ಅಂತಲೆ ಅರ್ಥ. ಮುಹೂರ್ತ ಕೂಡಿ ಬಂದರೆ ಎದುರಾಳಿಗಳನ್ನ ಜೇಬಿನಲ್ಲಿರುವ ಲಿಂಬೆಹಣ್ಣಿನಷ್ಟೇ ಸುಲಭವಾಗಿ ಹಿಡಿದು ಅಪ್ಪಚ್ಚಿ ಮಾಡುವುದರಲ್ಲಿ ರೇವಣ್ಣಗೆ ರೇವಣ್ಣನೇ ಸಾಟಿ.
Advertisement
Advertisement
ಹಾಗೇ ನೋಡಿದರೆ ಜೆಡಿಎಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಕುಮಾರಣ್ಣ, ರೇವಣ್ಣರ ಕಾಟಕ್ಕೆ ಪಕ್ಷ ಬಿಟ್ಟವರೇ ಜಾಸ್ತಿ. ಆದರೆ 2006 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಕೊಟ್ಟ ಆಡಳಿತ ರಾಜ್ಯ ರಾಜಕಾರಣದಲ್ಲಿ ಹೊಸ ನಿರೀಕ್ಷೇಯ ನಾಯಕೊಬ್ಬನನ್ನ ಹುಟ್ಟು ಹಾಕಿತ್ತು. ಅದರಲ್ಲೂ ಜೆಡಿಎಸ್ ಕಾರ್ಯಕರ್ತರಿಗೆ ದೇವೇಗೌಡರ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಸಿಕ್ಕಿತ್ತು. ಕುಮಾರ ಸ್ವಾಮಿಯವರ ಬಾ ಬ್ರದರ್, ಏನು ಬ್ರದರ್, ಹೇಳು ಬ್ರದರ್ ಅನ್ನೋ ಬ್ರದರ್ ಸೆಂಟಿಮೆಂಟ್ ವರ್ಕ್ ಔಟ್ ಆಗಿತ್ತು. ಕುಮಾರಸ್ವಾಮಿಯ ಬ್ರದರ್ ಇಮೇಜ್ ಪಕ್ಷಾತೀತವಾಗಿ ಪ್ರಸಿದ್ಧಿಯನ್ನು ಪಡೆದು ರಾಜ್ಯದ ಕೆಲವೇ ಕೆಲವು ಮಾಸ್ ಲೀಡರ್‍ಗಳ ಸಾಲಿಗೆ ಕುಮಾರಸ್ವಾಮಿಯವರನ್ನ ತಂದು ನಿಲ್ಲಿಸಿತ್ತು. ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುತ್ತಲೇ ಕಳೆದ 10-12 ವರ್ಷದಿಂದ ಮತ್ತೊಮ್ಮೆ ಸಿಎಂ ಆಗುವ ಕನಸ್ಸು ಕಂಡಿದ್ದರು. ಆದರೆ ತೀರ ಕಳಪೆ ಸಾಧನೆಯೊಂದಿಗೆ 37 ಸ್ಥಾನ ಗೆದ್ದು ಮನೆಯಲ್ಲಿ ಕೂರುವುದೇ ಕಾಯಂ ಎಂದುಕೊಂಡಾಗಲೇ ಅದೃಷ್ಟ ಬೆನ್ನತ್ತಿ ಬಂದಿತ್ತು. ಆದರೆ 80 ಶಾಸಕ ಬಲದ ಕಾಂಗ್ರೆಸ್ ಕೊಟ್ಟ ಬೆಂಬಲದಿಂದ ಸಿಎಂ ಆದ ಕುಮಾರಸ್ವಾಮಿ ತಮ್ಮ ಹಳೆಯ ಇಮೇಜ್ ಗೆ ತದ್ವಿರುದ್ಧವಾಗಿ ನಡೆದುಕೊಂಡು ಎಲ್ಲರ ಬೇಸರಕ್ಕೆ ಕಾರಣವಾದರು. ಕೇವಲ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕು ಅನ್ನೋ ಕಾರಣಕ್ಕೆ ನಾಯಿ ಹಸಿದಿತ್ತು, ರೊಟ್ಟಿಯು ಹಳಸಿತ್ತು ಎಂಬಂತೆ ಕಾಂಗ್ರೆಸ್ ಜೆಡಿಎಸ್ ಒಟ್ಟಾದಂತೆ ಕಾಣತೊಡಗಿತ್ತು ಸಮ್ಮಿಶ್ರ ಸರ್ಕಾರ ನಡೆಸಿದ ರೀತಿ. ರಾಜ್ಯದ ಮುಖ್ಯಮಂತ್ರಿ ಅನ್ನೋದನ್ನೆ ಮರೆತು ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಜಾಲಿ ಮೂಡ್ ನಲ್ಲಿದ್ದ ಕುಮಾರಸ್ವಾಮಿ ಶಾಸಕರನ್ನ ಕಾಲ ಕಸದಂತೆ ಕಂಡು ಅವಮಾನಿಸಿದ್ರು. ಅದು ಸಾಲದಂತೆ ಕಂಡ ಕಂಡ ಶಾಸಕರ ಕ್ಷೇತ್ರದಲ್ಲಿ ಕೈಯಾಡಿಸಿದ ರೇವಣ್ಣ, ಎಲ್ಲಾ ಸಚಿವರ ಖಾತೆಯಲ್ಲೂ ಅಧಿಕಾರ ಚಲಾಯಿಸಿ ಸೂಪರ್ ಸಿಎಂನಂತೆ ವರ್ತಿಸಿದರು. ಎಲ್ಲವನ್ನು ನೋಡಿ ಬೇಸತ್ತ ಸ್ವಪಕ್ಷೀಯ ಹಾಗೂ ಮಿತ್ರ ಪಕ್ಷದ ಶಾಸಕರೇ ಒಟ್ಟಾಗಿ ಸರ್ಕಾರ ಕೆಡವಿದರು. ಅಲ್ಲಿಯವರೆಗೆ ತಾಜ್ ವೆಸ್ಟ್ ಎಂಡ್ ನಲ್ಲಿ ಜಾಲಿಮೂಡ್‍ನಲ್ಲಿದ್ದ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಜೆಪಿ ನಗರದ ಮನೆ ಸೇರಿಕೊಂಡರು. ಇದನ್ನೂ ಓದಿ: ಸಚಿವ ರೇವಣ್ಣಗೆ ಗದರಿದ ಸಿಎಂ ಕುಮಾರಸ್ವಾಮಿ
ಮಗನ ರಾಜಕೀಯ ನಡೆ ಸರ್ಕಾರ ನಡೆಸಿದ ರೀತಿ ದೊಡ್ಡ ಗೌಡರ ಪಾಲಿಗೆ ರಾಮರಾಜ್ಯ ನಡೆಸಿದ ರಾಮನಂತೆ ಕಂಡಿರಬಹುದು. ಯಾಕೆಂದರೆ ಮಕ್ಕಳ ವಿಷಯದಲ್ಲಿ ಪುತ್ರ ವಾತ್ಸಲ್ಯದಲ್ಲಿ ಅವರು ಯಾವತ್ತಿದ್ದರೂ ಧೃತರಾಷ್ಟ್ರನಷ್ಟೇ ಕುರುಡು. ಆದರೆ ಜೆಡಿಎಸ್‍ನ ಸಾಮಾನ್ಯ ಕಾರ್ಯಕರ್ತರಿಗೂ ಅರ್ಥವಾಗಿದ್ದು ಇದು ಬ್ರದರ್ ಕುಮಾರಣ್ಣ ಅಲ್ಲ. ಇದು ಬೇರೆಯದೇ ಕುಮಾರಣ್ಣ ಅನ್ನೋದು. ಆದ್ದರಿಂದ ಜೆಡಿಎಸ್ ನಂಬಿಕೊಂಡರೆ ಅಷ್ಟೇ ಕಥೆ ಎಂದು ಹೊಸ ಲೆಕ್ಕಾಚಾರ ಆರಂಭಿಸಿದರು. ಅದರ ಪರಿಣಾಮ ಮಂಡ್ಯದಂತ ಮಂಡ್ಯದಲ್ಲೇ ಜೆಡಿಎಸ್‍ಗಾದ ಅವಮಾನ. ಕೆ.ಆರ್.ಪೇಟೆಯಲ್ಲಿ ನಾರಾಯಣಗೌಡರ ಭರ್ಜರಿ ಗೆಲುವು, ಜೆಡಿಎಸ್ ಬಾವುಟ ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಹಾರುವುದು ಡೌಟು ಎಂಬುದರ ಸ್ಪಷ್ಟ ಮುನ್ಸೂಚನೆ ನೀಡಿದೆ. ಕಾರ್ಯಕರ್ತರಿಗೆ ಅರ್ಥವಾದ ಸತ್ಯ ಮಾಜಿ ಪ್ರಧಾನಿಗಳಿಗೆ ಅರ್ಥವಾದಂತಿಲ್ಲ. ಈಗಲೂ ಪಕ್ಷ ಕಟ್ಟುತ್ತೇನೆ 2023ಕ್ಕೆ ಮತ್ತೆ ಪಕ್ಷ ಅಧಿಕಾರಕ್ಕೆ ತರುತ್ತೇನೆ ಅಂತ ಸಮಾವೇಶಕ್ಕೆ ಸಜ್ಜಾಗಿದ್ದಾರೆ. ಕೊಟ್ಟ ಕುದುರೇಯನ್ನೇರಲಾರದ ಕುಮಾರಣ್ಣ ಧೀರನೂ ಅಲ್ಲ, ಶೂರನು ಅಲ್ಲ ಅನ್ನೋದು ಪಕ್ಷದ ಕಾರ್ಯಕರ್ತರಿಗೆ ಅರ್ಥವಾಗಿದೆ. ಆದರೆ ಪುತ್ರ ವ್ಯಾಮೋಹದ ದೊಡ್ಡ ಗೌಡರು ಮಾತ್ರ ಕುದುರೆ ಏರದಿದ್ದರೇನಂತೆ ಅಂಬಾರಿ ಏರುತ್ತಾನೆ ಕುಮಾರ ಎಂದುಕೊಂಡು ಸಂಘಟನೆಯ ಮಾತನಾಡುತ್ತ ಮುಂದೆ ಮತ್ತೆ ನಮ್ಮದೇ ಅಧಿಕಾರ ಅನ್ನತೊಡಗಿದ್ದಾರೆ. ಅಪ್ಪನ ಮಾತು ಕೇಳಿ ರೇವಣ್ಣ, ಕುಮಾರಣ್ಣ ರೋಮಾಂಚಿತರಾಗಿರಬಹುದು ಮತ್ತೊಮ್ಮೆ ಪಟ್ಟಕ್ಕೇರುವ ಕನಸು ಶುರುವಾಗಿರಬಹುದು. ಆದರೆ ಮಗನಿಗೆ ರಾಜಕೀಯ ಆಸಕ್ತಿ ಉಳಿದಿದೆಯಾ ಇಲ್ಲವಾ ಎಂಬುದನ್ನೇ ಅರಿಯದ ದೊಡ್ಡ ಗೌಡರ ಪ್ರಯತ್ನ ಎಸ್.ಎಸ್.ಎಲ್.ಸಿ ಪಾಸಾಗದ ಮಗನನ್ನ ಐಎಎಸ್ ತರಬೇತಿಗೆ ಸಿದ್ಧಪಡಿಸಿದಂತಿದೆ.
[ಈ ಬರಹದಲ್ಲಿ ಪ್ರಕಟವಾಗಿರುವ ಅಭಿಪ್ರಾಯಗಳು ಲೇಖಕರದ್ದು.]