ಕಾರವಾರ: ಪ್ರೀತಿ ಹೆಸರಲ್ಲಿ ಜೆಡಿಎಸ್ (JDS) ಮುಖಂಡೆ ಪುತ್ರ ನೀಡಿದ ಕಿರುಕುಳ ಸಹಿಸಲಾಗದೇ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದಲ್ಲಿ (Karwar) ನಡೆದಿದೆ.
ಕದ್ರಾ ಕೆಪಿಸಿ ಕಾಲೋನಿಯ ನಿವಾಸಿ ರಿಶೇಲ್ ಡಿಸೋಜಾ(20) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದುಬಂದಿದ್ದು, ಜೆಡಿಎಸ್ ಮುಖಂಡೆ ಪುತ್ರ ಚಿರಾಗ್ ಪ್ರೀತಿ ಹೆಸರಲ್ಲಿ ಕಿರುಕುಳ ನೀಡಿದ್ದ ಎನ್ನಲಾಗಿದೆ. ಇದನ್ನೂ ಓದಿ: ಅಮೆರಿಕದ ಮಿಸಿಸಿಪ್ಪಿಯಲ್ಲಿ ಸರಣಿ ಗುಂಡಿನ ದಾಳಿಗೆ 6 ಮಂದಿ ಬಲಿ
ಈ ಕುರಿತು ಮೃತ ರಿಶೇಲ್ ಡಿಸೋಜಾ ತಂದೆ ಕ್ರಿಸ್ತೋದ್ ಡಿಸೋಜಾ ಕಾರವಾರ ತಾಲೂಕಿನ ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಚಿರಾಗ್ ಹಾಗೂ ನನ್ನ ಮಗಳು ರಿಶೇಲ್ ಇಬ್ಬರು ಪರಿಚಯಸ್ಥರು. ಆಗಾಗ ಚಿರಾಗ್ ನಮ್ಮ ಮನೆಯ ಬಳಿ ಸುತ್ತಾಡುತ್ತಿದ್ದ. ಅಲ್ಲದೇ ಪ್ರೀತಿಸುವುದಾಗಿ ಕಾಡಿಸುತ್ತಿದ್ದ. ಆದರೆ ರಿಶೇಲ್ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಫೋನ್ ಮಾಡಿ ಕೂಡ ಹಿಂಸಿಸುತ್ತಿದ್ದ. ಜೊತೆಗೆ ನೀನು ಬದುಕಿದ್ದು ಪ್ರಯೋಜನವಿಲ್ಲ. ನೀನು ಹೇಗಾದರೂ ಸತ್ತುಹೋಗು, ನೀನು ಬದುಕಿರುವುದಕ್ಕಿಂತ ಸತ್ತುಹೋದರೆ ಒಳ್ಳೆಯದು ಅಂತ ಬೈಯ್ದಿದ್ದಾನೆ ಎಂದು ಆರೋಪಿಸಿದ್ದಾರೆ.
ಚಿರಾಗ್ ಹೇಳಿದ್ದನ್ನು ಕೇಳಿ ರಿಶೇಲ್ ಶುಕ್ರವಾರ (ಜ.9) ಮಧ್ಯಾಹ್ನ 2 ಗಂಟೆ ಸುಮಾರಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಈ ಸಂಬಂಧ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ರಾಜ್ಯದಲ್ಲಿ ಮುಂದಿನ 24 ಗಂಟೆ ಶೀತಗಾಳಿ ಎಚ್ಚರಿಕೆ

