ರಾಯಚೂರು: ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಮಾವೇಶದಲ್ಲಿ ಶಿವನಗೌಡ ಮುಖ್ಯಮಂತ್ರಿಯವರ ವಿರುದ್ಧ ಅವಾಚ್ಯವಾಗಿ ಮಾತನಾಡಿದ್ದಾರೆ. ದೇವದುರ್ಗ ಶಾಸಕರ ಈ ಭಾಷಣ ಬಿಜೆಪಿ ಸಂಸ್ಕೃತಿ ಪ್ರಶ್ನಿಸುವಂತಾಗಿದೆ. ಶಿವನಗೌಡ ಈ ರೀತಿ ಹೇಳಿಕೆ ನೀಡಿದರೆ ಇದೇ ರೀತಿ ಕೆಳಮಟ್ಟದ ಉತ್ತರ ನೀಡಬೇಕಾಗುತ್ತದೆ. ಶಿವನಗೌಡ ಉಂಡ ಮನೆಯ ಜಂತಿ ಎಣಿಸುವವನು. ನೀನು ನಾಲಿಗೆ ಹರಿಬಿಟ್ಟರೆ ನಿನ್ನ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ದೇವದುರ್ಗದಲ್ಲಿ ನಡೆದ ಆಡಿಯೋ ಪ್ರಕರಣ ಚುನಾವಣೆಯ ನಂತರ ಮತ್ತೆ ತನಿಖೆಯಾಗಲಿದೆ. ಯಡಿಯೂರಪ್ಪ ಹಾಗು ಶಿವನಗೌಡ ಜೈಲಿಗೆ ಹೋಗ್ತಾರೆ. ಶಿವನಗೌಡ ವಿರುದ್ಧ ಸೂಕ್ತ ದಾಖಲೆಗಳೊಂದಿಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಹೇಳಿದ್ದಾರೆ.