ಬೆಂಗಳೂರು: ಸೈನಿಕ ಹೋದ್ರು ನಮಗೆ ಚಿಂತೆ ಇಲ್ಲ. ಕಾಂಗ್ರೆಸ್‌ನವರು ಗನ್ ತೆಗೆದುಕೊಂಡು ಹೋದ್ರು ಬುಲೆಟ್‌ಗಳು ಬಿಜೆಪಿ-ಜೆಡಿಎಸ್‌ನಲ್ಲಿ ಇವೆ ಎಂದು ಜೆಡಿಎಸ್ ನಾಯಕ ಸುರೇಶ್ ಬಾಬು (Suresh Babu) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ (C P Yogeshwar) ಕಾಂಗ್ರೆಸ್ (Congres) ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಿಂದ ಮೈತ್ರಿಗೆ ಹಿನ್ನಡೆ ಆಗಿಲ್ಲ. ನಮಗೆ ಮುಂಚೆಯೇ ಯೋಗೇಶ್ವರ್ ಕಾಂಗ್ರೆಸ್ ಸೇರುತ್ತಾರೆ ಎಂದು ಗೊತ್ತಿತ್ತು. ಮೈತ್ರಿಗೆ ಧಕ್ಕೆ ಬರಬಾರದು ಎಂದು ಕುಮಾರಸ್ವಾಮಿಯವರು ಕಾದು ನೋಡುವ ತಂತ್ರ ಮಾಡಿದ್ದರು ಎಂದು ತಿಳಿಸಿದ್ದಾರೆ.
ಯೋಗೇಶ್ವರ್ MLC ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗಲೇ ಎಲ್ಲರಿಗೂ ಅವರ ಒಳ ಮರ್ಮ ಏನು ಎಂದು ಗೊತ್ತಾಯ್ತು. ಯೋಗೇಶ್ವರ್ 5-6 ಪಕ್ಷದ ಬಿ ಫಾರ್ಮ್ ತೆಗೆದುಕೊಂಡಿದ್ದರು. ಬಿಜೆಪಿ ಅಥವಾ NDAಯಿಂದ ನಿಂತಿದ್ರೆ ಅವರೇನು MLCಗೆ ರಾಜೀನಾಮೆ ಕೊಡುವ ಅವಶ್ಯಕತೆ ಇರಲಿಲ್ಲ. ಅವರು ರಾಜೀನಾಮೆ ಕೊಟ್ಟಾಗಲೇ ವಾಮಮಾರ್ಗ ಹಿಡಿದಿದ್ದಾರೆ ಎಂದು ಗೊತ್ತಿತ್ತು ಎಂದಿದ್ದಾರೆ.
ಅವರು ಹೋಗಿದ್ದಕ್ಕೆ ನಾವ್ಯಾರು ಆತಂಕ ಪಡೋದಿಲ್ಲ. ನಾವು ಉತ್ತಮವಾದ ಅಭ್ಯರ್ಥಿಯನ್ನ ನಿರ್ಧಾರ ಮಾಡಿ NDA ಯಿಂದ ನಿಲ್ಲಿಸುತ್ತೇವೆ. ಬೇರೆ ಸಮುದಾಯದ ಮತ ಬರುತ್ತೆ, ಮುಸ್ಲಿಂ ಮತ ಬರುತ್ತೆ ಎಂದು ಹೋಗಿದ್ದಾರೆ. ಯೋಗೇಶ್ವರ್ ಮುಸ್ಲಿಮರ 4 ಎಕರೆ ಜಾಗ ಹೇಗೆ ಕಬಳಿಸಿದ್ರು ಎಂದು ಮುಸ್ಲಿಮರು ನಮ್ಮ ಬಳಿ ಮಾತಾಡಿದ್ದಾರೆ. ಇನ್ನೂ ಚನ್ನಪಟ್ಟಣದಲ್ಲಿ NDA ಅಭ್ಯರ್ಥಿಯನ್ನ ಗೆಲ್ಲುಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.