ಮಂಗಳೂರು: ಕರಾವಳಿ ರಾಜಕಾರಣದ ಅಜಾತಶತ್ರು ಎಂದೇ ಹೆಸರಾದ ಹಿರಿಯ ರಾಜಕಾರಣಿ, ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಅಮರನಾಥ ಶೆಟ್ಟಿ ಅಲ್ಪಕಾಲದ ಅಸೌಖ್ಯದ ಬಳಿಕ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಮರನಾಥ ಶೆಟ್ಟಿ(80) ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಗುತ್ತಿನ ಮನೆತನವಾದರೂ ತೀರಾ ಸರಳಜೀವಿಯಾಗಿದ್ದ ಅಮರನಾಥ ಶೆಟ್ಟರು ಮೂಡುಬಿದಿರೆ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ.
Advertisement
ಮಾಜಿ ಸಚಿವರು ಹಾಗೂ ಮೃದು ಮನಸ್ಸಿನ ಸರಳ ರಾಜಕಾರಣಿಯಾಗಿರುವ ನಮ್ಮ ಪಕ್ಷದ ಹಿರಿಯ ಮುಖಂಡರಾದ ಅಮರನಾಥಶೆಟ್ಟಿಯವರು ವಿಧಿವಶರಾಗಿರುವುದು ತೀವ್ರ ದುಃಖ ತಂದಿದೆ.ಅವರ ನಿಧನದಿಂದ ನಾವು ಸಜ್ಜನರೊಬ್ಬರನ್ನು ಕಳೆದುಕೊಂಡಂತಾಗಿದೆ.ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಪ್ರಾರ್ಥಿಸುತ್ತೇನೆ
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 27, 2020
Advertisement
1983ರಲ್ಲಿ ಮೊದಲ ಬಾರಿಗೆ ಶಾಸಕರಾದ ಅಮರನಾಥ ಶೆಟ್ಟಿ ರಾಮಕೃಷ್ಣ ಹೆಗಡೆ ಸರಕಾರದಲ್ಲಿ ಮುಜರಾಯಿ ಸಚಿವರಾಗಿದ್ದರು. ಆಬಳಿಕ 1985ರಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಯುವಜನ ಸೇವೆ, ಕ್ರೀಡಾ ಖಾತೆ ಸಚಿವರಾಗಿದ್ದರು. 1989ರಲ್ಲಿ ಸೋಲು. ಬಳಿಕ 1994ರಲ್ಲಿ ಮತ್ತೆ ಗೆದ್ದು ಜೆ.ಎಚ್ ಪಟೇಲ್ ಸರಕಾರದಲ್ಲಿ ಮುಜರಾಯಿ ಸಚಿವರಾಗಿದ್ದರು. ಅಂದಿನ ಸಂದರ್ಭದಲ್ಲಿ ಅಮರನಾಥ ಶೆಟ್ಟಿ ಎದುರು ಕರಾವಳಿ ಭಾಗದಲ್ಲಿ ಯಾವೊಬ್ಬ ರಾಜಕಾರಣಿಯೂ ಇರಲಿಲ್ಲ. ಸೋಲು, ಗೆಲುವು ಕಂಡರೂ, ಪಕ್ಷ ನಿಷ್ಠೆ ಅಮರನಾಥ ಶೆಟ್ಟಿ ಅವರು ಬಿಟ್ಟವರಲ್ಲ.
Advertisement
ಮಾಜಿ ಸಚಿವರು ಹಾಗೂ ನಮ್ಮ ಪಕ್ಷದ ಹಿರಿಯ ನಾಯಕರಾದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಅಮರನಾಥ ಶೆಟ್ಟಿ ಅವರು ನಮ್ಮನ್ನು ಅಗಲಿದ ವಿಚಾರ ಕೇಳಿ ತೀವ್ರ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಭಗವಂತ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
— H D Devegowda (@H_D_Devegowda) January 27, 2020
Advertisement
ಕಾಂಗ್ರೆಸ್, ಬಿಜೆಪಿಯಿಂದ ದೊಡ್ಡ ಮಟ್ಟದ ಆಫರ್ ಬಂದರೂ, ಪಕ್ಷ ಬಿಡಲ್ಲ. ಸತ್ತರೆ ಜನತಾ ಪಕ್ಷದಲ್ಲೇ ಸಾಯುವೆ ಎನ್ನುತ್ತಿದ್ದ ಅಪ್ಪಟ ರಾಜಕಾರಣಿ. ಹೀಗಾಗಿ ಜೆಡಿಎಸ್ ವರಿಷ್ಠ ದೇವೇಗೌಡರ ಆಪ್ತ ನಿಕಟವರ್ತಿಗಳಲ್ಲಿ ಒಬ್ಬರಾಗಿ ಉಳಿದಿದ್ದರು. ಮೂಡುಬಿದಿರೆ ಕ್ಷೇತ್ರದಲ್ಲಿ 1999ರ ಬಳಿಕ ನಾಲ್ಕು ಬಾರಿ ಸ್ಪರ್ಧಿಸಿದರೂ, ಜೆಡಿಎಸ್ಸಿಗೆ ನೆಲೆ ಇಲ್ಲದ ಕಾರಣ ಗೆಲುವು ಸಿಗಲಿಲ್ಲ. ಪಕ್ಷಕ್ಕೆ ನೆಲೆ ಇಲ್ಲದಿದ್ದರೂ ಸ್ವಂತ ವರ್ಚಸ್ಸಿನಿಂದ ಗೆದ್ದು ಕರಾವಳಿ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆ ತಂದುಕೊಟ್ಟಿದ್ದ ಕೀರ್ತಿ ಇವರದ್ದಾಗಿದೆ.
ಕೊನೆಯ ಚುನಾವಣೆಯಲ್ಲಿ ಅಮರನಾಥ ಶೆಟ್ಟಿ ಪ್ರಚಾರಕ್ಕೆ ಬರದಿದ್ದರೂ ಎದುರಾಳಿಗೆ ಸ್ಪರ್ಧೆ ಕೊಡುವಷ್ಟು ಮತಗಳನ್ನು ಜನರೇ ನೀಡುತ್ತಿದ್ದರು. ಮೂಲತಃ ಮಂಗಳೂರಿನ ಕೊಡ್ಮಾಣ್ ಗುತ್ತಿನವರಾದ ಅಮರನಾಥ ಶೆಟ್ಟಿ ಸಣ್ಣಂದಿನಲ್ಲೇ ಮೂಡುಬಿದಿರೆಯ ಪಾಲಡ್ಕದ ಮುಂಡ್ರುದೆಗುತ್ತಿನಲ್ಲಿ ನೆಲೆಯಾಗಿದ್ದರು. ಸ್ವಚ್ಛ, ಸರಳ ರಾಜಕಾರಣಿಯಾಗಿ ಬೆಳೆದು ಬಂದ ಅಮರನಾಥ ಶೆಟ್ಟಿ ಈ ಕಾಲದ ರಾಜಕಾರಣಿಗಳಿಗೆ ಮಾದರಿಯಾಗಿ ನಿಂತವರು.
ಅಮರನಾಥ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇ ಗೌಡ, ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.