ಬೆಂಗಳೂರು: ಜೆಡಿಎಸ್ ಪಕ್ಷ ಆಲದ ಮರವಲ್ಲ, ಗರಿಕೆ ಹುಲ್ಲು. ಗರಿಕೆ ಹುಲ್ಲನ್ನು ಬುಡ ಸಮೇತ ಕಿತ್ತು ಹಾಕಲು ಸಾಧ್ಯವಿಲ್ಲ ಎಂದು ಜೆಪಿ ಭವನದ ಜೆಡಿಎಸ್ ಕಚೇರಿಯಲ್ಲಿ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ಇಂದು ಜೆಪಿ ಭವನದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಸದ್ಯಸ್ಯರ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಮಾಜಿ ಶಾಸಕ ವೈ.ಎಸ್.ವಿ ದತ್ತಾ, ಜೆಡಿಎಸ್ ಪಕ್ಷ ಆಲದ ಮರವಲ್ಲ ಗರಿಕೆ ಹುಲ್ಲು. ನಮ್ಮ ಪಕ್ಷ ಗಟ್ಟಿಯಾಗಿದೆ. ಗರಿಕೆ ಹುಲ್ಲನ್ನು ಯಾರು ಬುಡದಿಂದ ಕೀಳಲು ಸಾಧ್ಯವಿಲ್ಲ, ಹಾಗೆಯೇ ಜೆಡಿಎಸ್ ಪಕ್ಷವನ್ನು ಉರಿಳಿಸಲು ಸಾಧ್ಯವಾಗಲ್ಲ ಎಂದರು. ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ. ಮುಂದಿನ ಲೋಕಸಭೆ ಚುನಾವಣೆಗೆ ಎಲ್ಲರೂ ಸಜ್ಜಾಗಬೇಕು. ಮುಂದಿನ ದಿನಗಳಲ್ಲಿ ಸ್ವ ಸಾಮಥ್ರ್ಯದಿಂದ ಪಕ್ಷ ಅಧಿಕಾರಕ್ಕೆ ಬರುವಂತೆ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಹೇಳಿದರು.
Advertisement
Advertisement
ಜನತಾದಳ ಪಕ್ಷಕ್ಕೆ 40 ವರ್ಷಗಳ ಇತಿಹಾಸ ಇದೆ ಅಂತ ಇನ್ನು ಮುಂದೆ ಕಾರ್ಯಕರ್ತರು ಹೇಳಿಕೊಳ್ಳಬೇಕು. ದೇಶಕ್ಕೆ ಪ್ರಧಾನಿ, ರಾಜ್ಯಕ್ಕೆ ಮುಖ್ಯಮಂತ್ರಿ ಕೊಟ್ಟ ಪಕ್ಷ ಅಂತ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ನಮ್ಮ ಪಕ್ಷಕ್ಕೆ ಬೇರೆ ಪಕ್ಷಗಳಿಗಿಂತ ಹೆಚ್ಚು ವಿಶೇಷತೆಯಿದೆ. ಕಾಂಗ್ರೆಸೇತರ ಪಕ್ಷ ಸ್ಥಾಪನೆಗೆ ಹುಟ್ಟಿದ್ದು ಜೆಡಿಎಸ್. ಜೈಲಿನಲ್ಲಿ ಹುಟ್ಟಿದ ಪಕ್ಷ, ಕೃಷ್ಣನಂತೆ ಹುಟ್ಟಿದ ಪಕ್ಷ ಇದು ಎಂದ ಪಕ್ಷದ ಇತಿಹಾಸವನ್ನು ನೆನಪು ಮಾಡಿಕೊಂಡರು.
Advertisement
Advertisement
ನಮಗೆ ಸಮ್ಮಿಶ್ರ ಸರ್ಕಾರದ ಅನುಭವ ಹೊಸತಲ್ಲ. ಧರ್ಮಸಿಂಗ್, ಯಡಿಯೂರಪ್ಪ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದ ಅನುಭವ ಇದೆ. ಯಡಿಯೂರಪ್ಪ ಜೊತೆ ಮಾಡಿದ ಸಮ್ಮಿಶ್ರ ಸರ್ಕಾರ ಅತ್ಯಂತ ಕೆಟ್ಟ ಅನುಭವ ನೀಡಿದೆ. ಕೋಮುವಾದಿ, ಸಂವಿಧಾನ ವಿರೋಧಿ, ಸರ್ವಾಧಿಕಾರಿ ಹೊಂದಿದ ಸರ್ಕಾರವನ್ನ ಕೆಡವಲು ಈಗ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಷ್ಟ್ರೀಯ ತುರ್ತು, ರಾಷ್ಟ್ರೀಯ ಅನಿವಾರ್ಯದ ದೃಷ್ಟಿಯಿಂದ ಇಂದು ಜಾತ್ಯಾತೀತ ಪಕ್ಷಗಳು ಒಟ್ಟಾಗಿ ಸೇರಲು ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಕೇವಲ 30-40 ಶಾಸಕರಿಗೆ ಇದು ಸೀಮಿತ ಆಗಬಾರದು. ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಕೊಡುತ್ತಾ ಪಕ್ಷ ಕಟ್ಟುವ ಕೆಲಸ ಮಾಡಬೇಕು. ಪಕ್ಷದ ಕಾರ್ಯಕರ್ತರಿಗೆ ಪಕ್ಷದ ವರಿಷ್ಠರು ಸ್ಥಾನಮಾನ ನೀಡಬೇಕು. ಈ ನಿಟ್ಟಿನಲ್ಲಿ ವರಿಷ್ಠರು ಚಿಂತನೆ ಮಾಡಿ ಅಧಿಕಾರ ಹಂಚಿಕೆ ಮಾಡಿದರೆ ಒಳ್ಳೆಯದು. ಕಾರ್ಯಕರ್ತರು ಗೊಂದಲಕ್ಕೆ ಈಡಾಗದೆ ಪಕ್ಷದ ಅಭಿವೃದ್ಧಿಗೆ ಕೆಲಸ ಮಾಡಬೇಕು. ಫ್ಲೆಕ್ಸ್ ಹುಚ್ಚಿನಿಂದ ಕಾರ್ಯಕರ್ತರು ಹೊರಗೆ ಬರಬೇಕು. ಹಿಂದಿನ ನಾಯಕರು ಹೋರಾಟದಿಂದ ಹುಟ್ಟುತ್ತಿದ್ದರು, ಈಗಿನ ನಾಯಕರು ಫ್ಲೆಕ್ಸ್ ನಲ್ಲಿ ಹುಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನ ಕಾರ್ಯಕರ್ತರು ಬಿಟ್ಟು ಪಕ್ಷದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ವೈ.ಎಸ್.ವಿ ದತ್ತಾ ಕರೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv