ಬೆಂಗಳೂರು: ಬಿಜೆಪಿ ಹೈಕಮಾಂಡ್ ನಾಗ್ಪುರದಲ್ಲಿದೆ. ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಇದೆ. ಜೆಡಿಎಸ್ ಹೈಕಮಾಂಡ್ ಬಿಡದಿಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಬಿಡದಿಯ ತೋಟದಲ್ಲಿ ನಡೆಯುತ್ತಿರುವ ಜನತಾ ಪರ್ವ 1.O ಮಿಷನ್ 123 ಕಾರ್ಯಾಗಾರದ ಆರನೇ ದಿನ ಎಸ್ ಸಿ, ಎಸ್ ಟಿ ಹಾಗೂ ಹಿಂದುಳಿದ ವರ್ಗದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು ಅವರು, ನಿಮ್ಮ ಕೂಗಳತೆಯಲ್ಲಿ ನಿಮ್ಮ ಪಕ್ಷದ ವರಿಷ್ಠ ನಾಯಕರು ಇದ್ದಾರೆ. ಕಾರ್ಯಕರ್ತರು ಹೈಕಮಾಂಡ್ ನೋಡಲು ವಿಮಾನ ಹತ್ತಿ ದೆಹಲಿಗೆ ಹೋಗಬೇಕಿಲ್ಲ. ಸಾವಿರಾರು ರೂಪಾಯಿ ಖರ್ಚು ಮಾಡಬೇಕಿಲ್ಲ ಎಂದು ಹೇಳಿದರು.
Advertisement
Advertisement
ರಾಜಕೀಯದ ಬಗ್ಗೆ ಜಿಗುಪ್ಸೆ ಬಂದಿತ್ತು!: ಕಾಂಗ್ರೆಸ್ ಜತೆ ಮೈತ್ರಿ ಸರ್ಕಾರ ಬಿದ್ದ ಮೇಲೆ ನಾನು ಈ ರಾಜಕೀಯದ ಬಗ್ಗೆ ಜಿಗುಪ್ಸೆಗೊಂಡಿದ್ದೆ. ಪರಸ್ಪರ ಕಾಲೆಳೆಯುವ ಪ್ರವೃತ್ತಿ ಕಂಡು ನನಗೆ ರಾಜಕೀಯ ಸಾಕೆನಿಸಿತ್ತು. ಬಿಡದಿಯ ತೋಟ ಸೇರಿಕೊಂಡೆ. ನಂಗೆ ನೆಮ್ಮದಿ ಬೇಕಿತ್ತು. ಸಮ್ಮಿಶ್ರ ಸರ್ಕಾರ ಹೋಗುತ್ತೆ ಅಂತ ನಂಗೆ ಗೊತ್ತಿತ್ತು. ಜನತೆಯ ಕೆಲಸ ಮಾಡಲು ಹೆಜ್ಜೆ ಹೆಜ್ಜೆಗೂ ಅಡ್ಡಿಗಳು, ಒತ್ತಡಗಳು. ಯಾವುದೇ ಸಂದರ್ಭದಲ್ಲೂ ಸರ್ಕಾರ ಹೋಗುತ್ತದೆ ಅಂತ ಗೊತ್ತಿದ್ದೂ ನಾನು ಅಮೆರಿಕಕ್ಕೆ ಹೋದೆ. ಅಂತಹ ಹಂಗಿನ ಸರ್ಕಾರ ನನಗೆ ಬೇಕಿರಲಿಲ್ಲ. ಮುಂದಿನ ಸಲ ಇದೇ ರೀತಿಯ ಅತಂತ್ರ ಸ್ಥಿತಿ ಬಂದರೆ ಮುಂದೆಂದೂ ನಾನು ಮತ ಕೇಳಲು ಬರುವುದಿಲ್ಲ ಎಂದು ತಿಳಿಸಿದರು.
Advertisement
Advertisement
ಸರ್ಕಾರ ಹೋದ ಮೇಲೆ ನಾನು ಬಿಡದಿ ತೋಟಕ್ಕೆ ಬಂದ ಮೇಲೆ ದಿನವೂ ಕಾರ್ಯಕರ್ತರು ಬರುತ್ತಿದ್ದರು. ಪಕ್ಷದ ಮೇಲಿನ ಅವರ ಪ್ರೀತಿ, ಬದ್ಧತೆ ನನ್ನ ರಾಜಕೀಯ ನಿವೃತ್ತಿಯ ನಿರ್ಧಾರವನ್ನು ಬದಲಿಸಿತು. ಬಿಡದಿಯಲ್ಲಿ ನೀವು ಕೂತಿರುವ ಈ ಜಾಗ ಹಾಗೂ ಈ ತೋಟ ನನ್ನ ಪಾಲಿನ ಪುಣ್ಯಭೂಮಿ. ನನ್ನ ಕಷ್ಟದ ದುಡಿಮೆಯಿಂದ 1983ರಲ್ಲಿ ಈ ಭೂಮಿಯನ್ನು ಖರೀದಿ ಮಾಡಿದೆ. ಕೃಷಿ ಮಾಡುವ ಉದ್ದೇಶ ನನಗಿತ್ತು. ಆದರೆ ಈ ಭೂಮಿ ನನ್ನನ್ನು ರಾಜಕೀಯಕ್ಕೆ ಎಳೆದು ತಂದಿತು. ಒಂದು ದಿನ ನನ್ನನ್ನು ದೊಡ್ಡ ಸಂಖ್ಯೆಯ ಕಾರ್ಯಕರ್ತರು ತೋಟಕ್ಕೆ ಬಂದರು. ಅವರು ಒತ್ತಾಯ ಮಾಡಿ ಹೀಗೆ ಹೇಳಿದರು. ನೀವು ಬಿಡದಿಯಲ್ಲಿ ಭೂಮಿ ಹೊಂದಿದ್ದೀರಿ. ಆದರೆ, ರಾಮನಗರದಲ್ಲಿ ಜೆಡಿಎಸ್ 3ನೇ ಸ್ಥಾನದಲ್ಲಿದೆ. ಪಕ್ಷಕ್ಕಾಗಿ ತಾವು ಕೆಲಸ ಮಾಡಬೇಕು. ನಮಗೆ ಮಾರ್ಗದರ್ಶನ ಮಾಡಬೇಕು ಎಂದಾಗ ನಾನು ಅವರ ಒತ್ತಾಯಕ್ಕೆ ಮಣಿದು ರಾಜಕೀಯಕ್ಕೆ ಬರಬೇಕಾಯಿತು. ಆಗ ತಂದೆಯವರು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಬೇಕು ಎಂದು ವರದೇಗೌಡರು ಭಾರೀ ಒತ್ತಡ ಹೇರಿದರು. ಆದರೆ ನಾನು ರಾಮನಗರದಲ್ಲಿ ಕಣಕ್ಕೆ ಇಳಿಯುವಂತೆ ಮನವಿ ಮಾಡಿದೆ. ಆಗ ದೇವೇಗೌಡರು ರಾಮನಗರದಿಂದ ಸ್ಪರ್ಧಿಸಿ ಗೆದ್ದು ಸಿಎಂ ಆದರು. ಒಂದು ವೇಳೆ ಆ ಘಟನೆ ನಡೆದಿದ್ದರೆ ನಾನಿಂದು ಇಲ್ಲಿ ನಿಂತು ಮಾತನಾಡುವ ಅವಕಾಶವೇ ಇರುತ್ತಿರಲಿಲ್ಲ ಅಂತ ಇತಿಹಾಸ ಮೆಲುಕು ಹಾಕಿದರು. ಇದನ್ನೂ ಓದಿ: 1 ಲಕ್ಷ ರೂಪಾಯಿ ಎಗರಿಸಿದ ಕೋತಿ- ಹಣ ಕಳೆದುಕೊಂಡವನಿಗೆ ಸಂಕಟ
ದೇವರ ಪ್ರೇರಣೆಯಿಂದ ಖರೀದಿ: ದೇವರ ಪ್ರೇರಣೆಯಿಂದ ನಾನು ಈ ಭೂಮಿ ಖರೀದಿ ಮಾಡಿದೆ ಎಂದು ಮತ್ತೆ ಹೇಳ ಬಯಸುತ್ತೇನೆ. ಅದೇ ನಂಬಿಕೆ, ಪ್ರೇರಣೆಯಿಂದ ಇಲ್ಲೇ ಈ ಕಾರ್ಯಗಾರ ನಡೆಯುತ್ತಿದೆ. ಪಕ್ಷದ ಕಚೇರಿಯಲ್ಲಿ ಅಥವಾ ರೆಸಾರ್ಟ್ ನಲ್ಲಿ ಮಾಡಬಹುದಿತ್ತು. ನಾನು ಹಾಗೆ ಮಾಡದೆ ಈ ಮಣ್ಣಿನ ಮಡಿಲಲ್ಲಿ ಈ ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಿದೆ. ಈ ಕಾರ್ಯಾಗಾರ ಸ್ಥಳದ ಈ ಎರಡೂವರೆ ಎಕರೆ ಜಾಗದಲ್ಲಿ ನನ್ನ ತಂದೆ ತಾಯಿ ಹೆಸರಿನಲ್ಲಿ ಶಾಶ್ವತವಾದ ಒಂದು ಅನಾಥಾಶ್ರಮ, ಒಂದು ದೇಗುಲ ಹಾಗೂ ಒಂದು ಛತ್ರ ಕಟ್ಟುವ ಉದ್ದೇಶ ನನ್ನದು. ಅದನ್ನು ಮಾಡಲು ಈ ಕಾರ್ಯಕ್ರಮದ ಜಾಗ ಮೀಸಲು ಇಟ್ಟಿದ್ದೇನೆ. ಇದು ಎಲ್ಲರಿಗೂ ಮುಕ್ತವಾಗಿರುತ್ತದೆ ಎಂದು ತಿಳಿಸಿದರು.
ಇಂತಹ ಜಾಗದಿಂದಲೇ ಪಕ್ಷ ಮತ್ತೆ ಪುಟಿದೇಳುತ್ತಿದೆ. ಈಗ ಎಲ್ಲವೂ ಶುಭಾರಂಭ ಆಗಿದೆ. ಇನ್ನು ಮುಂದುವರೆಸಿಕೊಂಡು ಹೋಗಬೇಕಿದೆ. ಅದನ್ನು ಎಲ್ಲರೂ ಚಾಚೂ ತಪ್ಪದೇ ಮಾಡಬೇಕಿದೆ. ಮುಂದೆ ನಾನು ಮುಖ್ಯಮಂತ್ರಿ ಆಗುವ ಉದ್ದೇಶಕ್ಕೆ ಮಾಡುತ್ತಿರುವ ಕಾರ್ಯಾಗಾರ ಇದಲ್ಲ. ರಾಜ್ಯದ ಭವಿಷ್ಯಕ್ಕಾಗಿ ಇದು. ಎಲ್ಲರೂ ಯೋಧರಂತೆ ಕೆಲಸ ಮಾಡಬೇಕು. ರಾಷ್ಟ್ರೀಯ ಪಕ್ಷಗಳು ದಲಿತ-ಹಿಂದುಳಿದ ಜನರಿಗೆ ಮಾಡಿದ್ದೇನು? ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಜೆಪಿ ಸರ್ಕಾರ ಹಾಗೂ ಸಿದ್ದರಾಮಯ್ಯ ಸರ್ಕಾರ ಈ ಜನರಿಗೆ ಕೊಟ್ಟಿದ್ದೇನೂ ಇಲ್ಲ. ಐದು ವರ್ಷ ಸಿಎಂ ಆಗಿದ್ದ ಅವರು ಎಷ್ಟೆಲ್ಲ ಮಾಡಬೇಕಿತ್ತು, ಆದರೆ ಮಾಡಲಿಲ್ಲ. ಸಿದ್ದರಾಮಯ್ಯ ಅವರು 85,000 ಕೋಟಿ ರೂಪಾಯಿ ಹಣವನ್ನು ದಲಿತ ಸಮುದಾಯದ ಉದ್ಧಾರಕ್ಕೆ ಕೊಟ್ಟಿದ್ದೇವೆ ಎಂದು ಹೇಳಿದ್ದರು. ಆದರೆ ಆಗಿದೆಯಾ? ಯಾರಿಗೆ ಹೋಯಿತು ಆ ದುಡ್ಡು? ಗಂಗಾ ಕಲ್ಯಾಣ ಯೋಜನೆಯಲ್ಲೂ 2016ರಿಂದ ಯಾರಿಗೂ ಉಪಯೋಗವಾಗಿಲ್ಲ. ನಿಜವಾದ ಒಬ್ಬ ಫಲಾನುಭವಿಯನ್ನೂ ಗುರುತಿಸಿಲ್ಲ ಅಂತ ಕಿಡಿಕಾರಿದರು.
ಇನ್ನು ನರೇಂದ್ರ ಮೋದಿ ಅವರು ಸ್ವತಂತ್ರವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಎಲ್ಲವನ್ನೂ ಆರೆಸ್ಸೆಸ್ ನಿರ್ಧಾರ ಮಾಡುತ್ತದೆ. ಸೂಪರ್ ಹೈಕಮಾಂಡ್ ಆಗಿ ಆರೆಸ್ಸೆಸ್ ಕೆಲಸ ಮಾಡುತ್ತಿದೆ ಅಂತ ಆರ್.ಎಸ್.ಎಸ್. ವಿರುದ್ದವೂ ಆಕ್ರೋಶ ಹೊರ ಹಾಕಿದರು.