– ಸಿದ್ದು, ಹೆಚ್‍ಡಿಕೆ ಇಬ್ಬರೂ ಕಾರಣ ಅಂದ್ರು ವಿಶ್ವನಾಥ್
ನವದೆಹಲಿ: ಅಣ್ಣ ಅಣ್ಣ ಅಂತ ಹೇಳಿ ನೀವು ಮಾಡಿದ್ದೇನು..? ತಮ್ಮ ತಪ್ಪನ್ನು ಸಿದ್ದರಾಮಯ್ಯ ಮೇಲೆ ಹಾಕಿದ್ದೆಷ್ಟು ಸರಿ? ಹೆಚ್‍ಡಿಕೆ ಸರಿಯಾಗಿ ನಡೆದುಕೊಂಡಿದ್ರೆ ಏನೂ ಆಗ್ತಿರಲಿಲ್ಲ. ಇದನ್ನು ಜನತಾದಳದ ಪ್ರಮುಖ ನಾಯಕರೇ ಹೇಳ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಹೆಚ್.ಎಂ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ಕಾರಣವಲ್ಲ. ಚುನಾಯಿತ ಪ್ರತಿನಿಧಿಗಳನ್ನು ಕುಮಾರಸ್ವಾಮಿ ಸರಿಯಾಗಿ ನಡೆಸಿಕೊಂಡಿಲ್ಲ. ಸಿದ್ದರಾಮಯ್ಯ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನಾನೇ ಏನಾದ್ರೂ ಕೇಳಿದ್ರೆ ಕೆಲಸ ಆಗ್ತಾ ಇರಲಿಲ್ಲ. ನಿಮ್ಮ ಪಕ್ಷದ ಶಾಸಕರನ್ನೇ ಇಟ್ಟುಕೊಳ್ಳಲು ಆಗಲಿಲ್ಲ ಎಂದು ಹೆಚ್‍ಡಿಕೆ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸಾಕಿರೋ ಗಿಣಿ ಅಲ್ಲ, ನನ್ನ ಬೆಳೆಸಿದ್ದು ರಾಮನಗರ ಜನ- ಸಿದ್ದುಗೆ ಹೆಚ್‍ಡಿಕೆ ತಿರುಗೇಟು
ಇದೇ ವೇಳೆ ಹೆಚ್ ವಿಶ್ವನಾಥ್ ಮಾತನಾಡಿ, ಸಮ್ಮಿಶ್ರ ಸರ್ಕಾರ ಪತನಕ್ಕೆ ಇಬ್ಬರೂ ಕಾರಣ. ಸಿದ್ದರಾಮಯ್ಯ, ಹೆಚ್.ಡಿ ಕುಮಾರಸ್ವಾಮಿ ಇಬ್ಬರೂ ಸಮಬಲರು. ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯ ಕೇಳಲಿಲ್ಲ. ಜೆಡಿಎಸ್ ಶಾಸಕರನ್ನು ಕುಮಾರಸ್ವಾಮಿ ಕೇಳಲಿಲ್ಲ. ಯಾರನ್ನೂ ಹೇಳದೆ ಕೇಳದೆ ಸರ್ಕಾರ ಮಾಡಿದ್ದೀರಿ. ಪಕ್ಷ ರಾಜಕಾರಣ ಇಲ್ಲದೆ ಇರುವುದರಿಂದ ಪಕ್ಷಾಂತರ ಕ್ಕೆ ಕಾರಣವಾಗುತ್ತದೆ. ಪಕ್ಷ ಕುಟುಂಬ, ವ್ಯಕ್ತಿ, ಒಂದು ಗುಂಪಿಗೆ ಸೀಮಿತವಾದರೆ ಪಕ್ಷಾಂತರ ಆಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ಗುರುವಾರದಿಂದ ಸಮ್ಮಿಶ್ರ ಸರ್ಕಾರ ಪತನಕ್ಕೆ ಯಾರು ಕಾರಣ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನಡುವೆ ಟ್ವಿಟ್ಟರ್ ವಾರ್ ನಡೆದಿತ್ತು.