ಬೆಂಗಳೂರು: ಸಿಎಂ ಕುಮಾರಸ್ವಾಮಿಯವರ ಹೇಳಿಕೆಗಳನ್ನು ಗಮನಿಸಿದರೆ ತಮ್ಮ ರಾಜಕೀಯ ಲಾಭಕ್ಕಾಗಿ ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತ್ರ ರೂಪಿಸಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದ್ದಾರೆ.
ಸಿಎಂ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಖಂಡ ಕರ್ನಾಟಕಕ್ಕೆ ಹಿರಿಯರು ರಕ್ತ ಹರಿಸಿದ್ದಾರೆ. ಉತ್ತರ ಕರ್ನಾಟಕದ ಜನತೆಯನ್ನ ಸವತಿ ಮಕ್ಕಳಂತೆ ಸಿಎಂ ಕಾಣುತ್ತಿದ್ದಾರೆ. ನಿಮ್ಮ ಸಾಲಮನ್ನಾ ಮಾಡಲು ನೀವೇನು ನಮಗೆ ವೋಟ್ ಹಾಕಿದ್ದೀರಾ ಅಂತಾ ಪ್ರಶ್ನೆ ಮಾಡಿದ್ದು, ಸಿಎಂ ಅವರ ದುರಂಹಕಾರದ ಮಾತಾಗಿದೆ. ಸಿಎಂರವರ ಹೇಳಿಕೆಗಳನ್ನು ಗಮನಿಸಿದರೆ, ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತ್ರ ರೂಪಿಸಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಮತ್ತೆ ಮಾಧ್ಯಮಗಳ ಮೇಲೆ ಸಿಎಂ ಎಚ್‍ಡಿಕೆ ಉಗ್ರ ಪ್ರತಾಪ
Advertisement
ಮಾಜಿ ಪ್ರಧಾನಿ ದೇವೆಗೌಡರ ವಿರುದ್ಧ ಹರಿಹಾಯ್ದ ಅವರು, ಈ ಹಿಂದೆ ವೀರಶೈವ – ಲಿಂಗಾಯತ ಪ್ರತ್ಯೇಕತೆ ಮಾಡಲು ಕಾಂಗ್ರೆಸ್ ಕೈ ಹಾಕಿತ್ತು. ಈಗ ಜೆಡಿಎಸ್ ರಾಜ್ಯ ಪ್ರತ್ಯೇಕ ಮಾಡುವ ಹುನ್ನಾರ ಮಾಡ್ತಿದೆ. ದೇವೇಗೌಡರ ಈ ತಂತ್ರವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಪ್ರತ್ಯೇಕ ರಾಜ್ಯ ಹೋರಾಟ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಮೌನವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ತಿಳಿಸಿದರು.
Advertisement
ಮಂಗಳವಾರ ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ ನಡೆಸಲು ಹೋರಾಟಗಾರರು ಮುಂದಾಗಿದ್ದಾರೆ. ಹೀಗಾಗಿ ಹೋರಾಟಗಾರರ ಮನವೊಲಿಸಲು ನಾನು ಬೆಳಗಾವಿಗೆ ತೆರಳುತ್ತೇನೆ. ರಾಜ್ಯವನ್ನು ವಿಭಜಿಸಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.