– ಶಿಕ್ಷಣ ಇಲಾಖೆಗೆ ತುರ್ತಾಗಿ ಸಚಿವರು ಬೇಕಿದೆ
– ಅಪ್ಪ, ಮಗನಿಗೆ ವಿಶ್ವನಾಥ್ ಗುದ್ದು
– ರಾಜೀನಾಮೆ ವಾಪಸ್ ಪಡೆಯಲ್ಲ
ಬೆಂಗಳೂರು: ಅಲ್ಪ ಸಂಖ್ಯಾತರಿಗೆ ಅವಕಾಶ ನೀಡಲೇ ಬೇಕಿತ್ತು. ಫಾರೂಕ್‍ಗೆ ಸಚಿವ ಸ್ಥಾನ ಕೊಟ್ಟಿದ್ರೆ, ಒಬ್ಬ ಅಲ್ಪ ಸಂಖ್ಯಾತ, ಹಿಂದುಳಿದ ವರ್ಗ, ದಲಿತರಿಗೆ ಅವಕಾಶ ಕೊಟ್ಟಂತೆ ಆಗುತ್ತಿತ್ತು. ಜೆಡಿಎಸ್ ಒಂದು ಜಾತ್ಯಾತೀತ ಪಕ್ಷ. ಹೀಗಾಗಿ ಎಲ್ಲ ವರ್ಗಕ್ಕೂ ಅವಕಾಶ ನೀಡಬೇಕಿತ್ತು ಎಂದು ಹೇಳುವ ಮೂಲಕ ಖಾತೆ ಹಂಚಿಕೆ ಬಗ್ಗೆ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷೇತರರಿಗೆ ಇನ್ನೂ ಯಾವುದೇ ಖಾತೆ ಹಂಚಿಕೆ ಮಾಡದ ವಿಚಾರ ಸಂಬಂಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ದಲಿತರಿಗೆ, ಹಿಂದುಳಿದವರಿಗೆ ಅವಮಾನ ಮಾಡಬೇಡಿ. ಸಚಿವ ಸ್ಥಾನ ನೀಡಿ ಎಷ್ಟು ದಿನ ಆಯಿತು. ಆದರೆ ಖಾತೆ ಯಾಕೆ ಇನ್ನೂ ಕೊಟ್ಟಿಲ್ಲ. ಇದೊಂದು ರೀತಿಯ ಅವಮಾನ ಮಾಡಿದ ಹಾಗೆ ಎಂದು ಹೇಳಿದರು.
Advertisement
Advertisement
ಪ್ರಮುಖವಾಗಿ ಶಿಕ್ಷಣ ಇಲಾಖೆಯಲ್ಲಿ ಪಠ್ಯ ಪುಸ್ತಕ ಸೇರಿದಂತೆ ಹತ್ತಾರು ಸಮಸ್ಯೆಗಳಿವೆ. ಮಹೇಶ್ ರಾಜೀನಾಮೆ ಕೊಟ್ಟ ನಂತರ ಇಲಾಖೆಗೆ ಮುಖ್ಯಸ್ಥರೇ ಇಲ್ಲದಂತಾಗಿದೆ. ಈ ಇಲಾಖೆಗೆ ತುರ್ತಾಗಿ ಒಬ್ಬ ಸಚಿವರು ಬೇಕಾಗಿದ್ದಾರೆ. ಸಿಎಂ ಬಳಿ ಅಬಕಾರಿ ಸೇರಿದಂತೆ ಹಲವು ಖಾತೆಗಳಿವೆ. ಕೆಲವನ್ನು ಬೇರೆಯವರಿಗೆ ಹಂಚಿಕೆ ಮಾಡಲಿ ಎಂದು ಸಲಹೆ ನಿಡಿದರು.
Advertisement
ಇದೇ ವೇಳೆ ಜಿಂದಾಲ್ ಭೂಮಿ ಪರಭಾರೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ವಿಶ್ವನಾಥ್, ಜಿಂದಾಲ್ ವಿಚಾರದಲ್ಲಿ ಸಿದ್ದರಾಮಯ್ಯ ಯಾಕೆ ಮೌನವಾಗಿ ಇದ್ದಾರೆ. ತೊಡೆ ತಟ್ಟಿ 350 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಈಗ ಏನ್ ಮಾಡ್ತಿದ್ದಾರೆ. ಸರ್ಕಾರದ ಭಾಗವಾಗಿ ಇದ್ದರು ಯಾಕೆ ಮಾತಾಡ್ತಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾಗಿ ತಮ್ಮ ಕೆಲಸವೇ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
ಪಾದಯಾತ್ರೆ ಮಾಡಿ ಗಣಿ ಲೂಟಿ ಹಣ ತರುತ್ತೇನೆ ಎಂದು ಹೇಳಿದ್ರಿ. ನೀವು ಸಿಎಂ ಆದಾಗ ಒಂದು ರೂಪಾಯಿ ಬೊಕ್ಕಸಕ್ಕೆ ತರಲಿಲ್ಲ. ಸಂತೋಷ್ ಹೆಗ್ಡೆ ವರದಿ ಪುಟಗಟ್ಟಲೆ ಇದ್ದರೂ ನಿಮ್ಮಿಂದ ಯಾವ ಕ್ರಮ ತಗೋಳೋಕೆ ಆಗಿಲ್ಲ. ಈಗ ಮೌನವಾಗಿ ಯಾಕೆ ಇದ್ದೀರಿ. ಸಿದ್ದರಾಮಯ್ಯ ಅವರೇ ಜಿಂದಾಲ್ ಬಗ್ಗೆ ಮಾತಾಡಿ. ಸಿದ್ದರಾಮಯ್ಯ ಈ ಸರ್ಕಾರದಲ್ಲಿ ಮಂತ್ರಿಗಳ ಮಂತ್ರಿ, ಅದು ಹೇಗೆ ಸರ್ಕಾರದ ಭಾಗ ಅಲ್ಲ ಎಮದು ಹೇಳುತ್ತೀರಿ. ಅಂದು ತೊಡೆ ತಟ್ಟಿದವರಿಗೆ ಇಂದು ಏನಾಯ್ತು ಎಂದು ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ನಿರ್ಧಾರದಿಂದ ನಾನು ವಾಪಸ್ ಬರುವ ಪ್ರಶ್ನೆಯೇ ಇಲ್ಲ. ರಾಜೀನಾಮೆ ವಾಪಸ್ ಪಡೆಯಲ್ಲ. ನಾನೇ ದೇವೇಗೌಡರಿಗೆ ರಾಜೀನಾಮೆ ಅಂಗಿಕಾರ ಮಾಡುವಂತೆ ಇಂದು ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನನ್ನ ನಿರ್ಧಾರದಿಂದ ಹಿಂದೆ ಸರಿಯೋದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.