ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ತನ್ನ ಸೈನ್ಯವನ್ನು ರೆಡಿ ಮಾಡಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸೆಡ್ಡು ಹೊಡೆಯಲು ನಿರ್ಧಾರ ಮಾಡಿರುವ ಜೆಡಿಎಸ್, ಲಕ್ಷಾಂತರ ಜನರ ಸಮ್ಮುಖದಲ್ಲಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಫೋಷಣೆ ಮಾಡಲು ಇಂದು ಅದ್ಧೂರಿ ಸಮಾವೇಶ ಆಯೋಜಿಸಿದೆ.
ವಿಕಾಸ ಪರ್ವದ ಹೆಸರಿನಲ್ಲಿ ಯಲಹಂಕದ ಬಳಿ 130 ಎಕರೆ ಜಾಗದಲ್ಲಿ ಮಧ್ಯಾಹ್ನ 12 ಗಂಟೆಗೆ ಸಮಾವೇಶ ಆಯೋಜಿಸಿದ್ದು, 10 ಲಕ್ಷ ಜನ ಸೇರಿಸುವ ಪ್ಲಾನ್ ಮಾಡಿದೆ. ಇನ್ನು ಚುನಾವಣೆ ಸಮರಕ್ಕೆ ತಮ್ಮ ಹುರಿಯಾಳುಗಳನ್ನು ಕಣಕ್ಕೆ ಇಳಿಸಲು ಸಜ್ಜಾಗಿದ್ದು, 150 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಕೂಡ ಸಿದ್ಧತೆ ಮಾಡಿಕೊಂಡಿದೆ.
25 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ದಲಿತ ಮತಗಳು ನಿರ್ಣಾಯಕವಾಗಿದ್ದು, ಆ ಮತಗಳನ್ನು ತನ್ನತ್ತ ಸೆಳೆಯಲು ಜೆಡಿಎಸ್ ಪಕ್ಕಾ ಪ್ಲಾನ್ ಮಾಡಿಕೊಂಡಿದೆ. ಇದೇ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಿಎಸ್‍ಪಿ ನಾಯಕಿ ಮಾಯಾವತಿ ಆಗಮಿಸುತ್ತಿದ್ದು, ಜೆಡಿಎಸ್‍ಗೆ ಪರವಾಗಿ ಬೆಂಬಲದ ಕಹಳೆ ಊದಲಿದ್ದಾರೆ.
ಮೋದಿ, ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಿದ್ದಾರೆ ಎಂದು ಸಮಾವೇಶ ಮಾಡಿಲ್ಲ. ಪಕ್ಷ ಅಧಿಕಾರಕ್ಕೆ ತರಲು ಸಮಾವೇಶ ಮಾಡುತ್ತಿದ್ದು, ಸ್ವತಂತ್ರ ಬಲದಲ್ಲಿ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.