ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ಸುಮಾರು ಒಂದು ದಶಕದಿಂದ ಕಾಮಗಾರಿ ನೆನೆಗುದಿಗೆ ಬಿದ್ದು ಈಗ ಉದ್ಘಾಟನೆಯಾಗಿರುವ ನೂತನ ರಂಗಮಂದಿರಕ್ಕೆ ಪುನೀತ್ ರಾಜಕುಮಾರ್ (Puneeth Rajkumar) ಹೆಸರಿಡಲು ಗಲಾಟೆ ನಡೆದಿದೆ.
ರಂಗಮಂದಿರ ಮುಂದೆ ಅಪ್ಪು ಪುತ್ಥಳಿ ಪ್ರತಿಷ್ಠಾಪಿಸಲು ಜೆಡಿಎಸ್ ಮುಂದಾಗಿದ್ದು, ಮೆರವಣಿಗೆ ವೇಳೆ ಜೆಡಿಎಸ್ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಗಲಾಟೆಯಾಗಿದೆ. ಸಿಂಧನೂರು ಗ್ರಾಮೀಣ ಠಾಣೆ ಪಿಎಸ್‌ಐ (PSI) ಮಣಿಕಂಠರ ಕಾಲರ್ ಹಿಡಿದು ಹಲ್ಲೆ ಮಾಡಲಾಗಿದೆ. ಸಿಂಧನೂರು ಜೆಡಿಎಸ್ (JDS) ಶಾಸಕ ವೆಂಕಟರಾವ್ ನಾಡಗೌಡ ಪುತ್ರ ಅಭಿಷೇಕ ನಾಡಗೌಡ ಹಾಗೂ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ.
ಸಿಂಧನೂರು ನಗರದ ಸುಕಾಲಪೇಟೆ ರಸ್ತೆಯಲ್ಲಿ ನಿರ್ಮಾಣವಾಗಿರುವ ನೂತನ ರಂಗಮಂದಿರಕ್ಕೆ ಪುನೀತ್ ರಾಜಕುಮಾರ್ ಹೆಸರಿಡಲು ಶಾಸಕರ ಪುತ್ರ ಒತ್ತಾಯಿಸಿದ್ದು, ಕಾಂಗ್ರೆಸ್ (Congress) ಕೈಯಲ್ಲಿರುವ ನಗರಸಭೆ ಆಡಳಿತ ಮಂಡಳಿ ಅಪ್ಪು ಹೆಸರಿಡಲು ವಿರೋಧಿಸಿದ್ದು, ಸ್ಥಳೀಯ ಕಲಾವಿದರ ಹೆಸರಿಡಲು ಕಾಂಗ್ರೆಸ್ ಮುಂದಾಗಿತ್ತು. ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ಕಣ್ಣೀರು – ಬಿಜೆಪಿ ಬಿಡಲ್ಲ ಎಂದು ಸ್ಪಷ್ಟನೆ
ಮಾ. 13ರಂದು ರಂಗಮಂದಿರ ಉದ್ಘಾಟನೆಯಾಗಿದ್ದು, ಇಂದು (ಮಾರ್ಚ್ 14) ಪುನೀತ್ ರಾಜಕುಮಾರ್ ಪುತ್ಥಳಿ ಪ್ರತಿಷ್ಠಾಪಿಸಲು ಜೆಡಿಎಸ್ ಮುಂದಾಗಿದ್ದು, ನಗರದ ಎಪಿಎಂಸಿಯಿಂದ ರಂಗಮಂದಿರದವರೆಗೆ ಅಪ್ಪು ಪುತ್ಥಳಿ ಮೆರವಣಿಗೆ ವೇಳೆ ಗಲಾಟೆ ನಡೆದಿದೆ. ಪಿಎಸ್‌ಐ ಮೇಲೆ ಹಲ್ಲೆ ನಡೆದಿದ್ದನ್ನು ಖಂಡಿಸಿ ಅವರ ಪರವಾಗಿ ಸಾರ್ವಜನಿಕರು ಪ್ರತಿಭಟನೆಯನ್ನು ನಡೆಸಿದರು. ಸದ್ಯ ಮೆರವಣಿಗೆಯನ್ನು ಅರ್ಧಕ್ಕೆ ನಿಲ್ಲಿಸಿದ್ದು, ಮೆರವಣಿಗೆಗೆ ಸೇರಿದ್ದವರನ್ನು ಚದುರಿಸಲಾಗಿದೆ. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದನ್ನೂ ಓದಿ: ಗುಬ್ಬಿ ಶ್ರೀನಿವಾಸ್‌ಗೆ ಆಹ್ವಾನ – ಇಬ್ರಾಹಿಂ ವಿರುದ್ಧ ಹೆಚ್‌ಡಿಕೆ ಗರಂ