– ಜೆಡಿಎಸ್ ಬಿಜೆಪಿಯ ಬಿ ಟೀಂ ಅಂತ ಹೇಳಿದ್ದೇ ಸಿದ್ದರಾಮಯ್ಯ
– ಸರ್ಕಾರ ಬಿದ್ದು ಹೋದರೂ ಏನು ಸಮಸ್ಯೆಯಿಲ್ಲ
– ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ ಇಲ್ಲ
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ 79 ಸ್ಥಾನ ಹೊಂದಿದೆ. ಇದರಿಂದ ಏನು ಬದಲಾವಣೆ ಆಗುವುದಿಲ್ಲ. ಹೀಗಾಗಿ ಸರ್ಕಾರ ಬೀಳಿಸಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದು ಅಸಾಧ್ಯ. ಒಂದು ವೇಳೆ ಸರ್ಕಾರ ಬಿದ್ದು ಹೋದರೂ ಏನು ಸಮಸ್ಯೆ ಇಲ್ಲ. ಆಕಾಶ ಏನು ಬಿದ್ದು ಹೋಗುವುದಿಲ್ಲ. ಮೇ 23 ನಂತರ ಎಲ್ಲ ಬೆಳವಣಿಗೆಯೂ ತಿಳಿಯಲಿದೆ. ಮೈತ್ರಿ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಕುಮಾರಸ್ವಾಮಿ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ತಿಳಿಸಿದರು.
Advertisement
Advertisement
ಸಿದ್ದರಾಮಯ್ಯ ಸಿಎಂ ಆಗಲು ಸದ್ಯ ಯಾವ ಮಾರ್ಗವೂ ಇಲ್ಲ. ಎಲ್ಲ ಸಮಾನ ಮನಸ್ಕರು ಸೇರಿದರೂ ಕಾಂಗ್ರೆಸ್‍ಗೆ 113 ಸೀಟು ಸಿಗಲ್ಲ. ಹೀಗಾಗಿ ತಕ್ಷಣಕ್ಕೆ ಸಿದ್ದರಾಮಯ್ಯ ಸಿಎಂ ಆಗಲು ಅವಕಾಶವಿಲ್ಲ ಎಂದರು.
Advertisement
ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಕೈ ಶಾಸಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯನವರಿಗೆ ಅನೇಕ ಮಾರ್ಗಗಳಿವೆ. ಈಗ ಎಚ್.ಡಿ.ಕುಮಾರಸ್ವಾಮಿಯವರು ಸಿಎಂ ಹುದ್ದೆಯಲ್ಲಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ ಅಂತ ಕಾಂಗ್ರೆಸ್ ನಾಯಕರು ಹೇಳುವುದು ಸರಿಯಲ್ಲ ಎಂದು ಕಿಡಿಕಾರಿದರು.
Advertisement
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಮಾಜಿ ಸಿಎಂ ಹೇಳಿಕೆ ಕಿಡಿಕಾರಿ ವಿಶ್ವನಾಥ್ ಅವರು, ಆ ಮಾತು ಸಿದ್ದರಾಮಯ್ಯನವರಿಗೆ ಅನ್ವಯಿಸುತ್ತದೆ. ಜೆಡಿಎಸ್ ಬಿಜೆಪಿಯ ಬಿ ಟೀಂ ಅಂತ ಹೇಳಿದ್ದು ಅವರೇ. ಜೆಡಿಎಸ್‍ಗೆ ವೋಟ್ ಹಾಕಿದರೆ ಅದು ಬಿಜೆಪಿಗೆ ಹಾಕಿದಂತೆ ಎಂದು ಪ್ರಚಾರ ಮಾಡಿದ್ದರು. ಈ ಹೇಳಿಕೆಯಿಂದಲೇ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಹೀಗಾಗಿ ಬಿಜೆಪಿಗೆ 104 ಸೀಟು ಬರಲು ಸಿದ್ದರಾಮಯ್ಯನವರೇ ಕಾರಣ ಎಂದು ತಿರುಗೇಟು ಕೊಟ್ಟರು.
ಶ್ರೀನಿವಾಸ್ ಪ್ರಸಾದ್ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಉಭಯ ಕುಶಲೋಪರಿ ಮಾತನಾಡಲು ಸೇರಿದ್ದೇವು. ಯಾವುದೇ ಪಕ್ಷದಲ್ಲಿ ಇದ್ದರು ನಾವು 40 ವರ್ಷದ ಸ್ನೇಹಿತರು. ಹೀಗಾಗಿ ಭೇಟಿಯಾಗಿದ್ದೇವು. ಪರಸ್ಪರ ಆರೋಗ್ಯ ವಿಚಾರಣೆ ಮಾಡಿಕೊಳ್ಳಲು ಅವರ ಮನೆಗೆ ಹೋಗಿದ್ದೆ ಅಷ್ಟೇ. ಭೇಟಿಯಾದಾಗ ರಾಜಕೀಯ ಚರ್ಚೆ ಇರುತ್ತದೆ ಅದು ಸಹಜ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಲೆಕ್ಕ ಹೇಗಿದೆ ಅಂತ ಕೇಳಿದೆ. ಅದಕ್ಕೆ ಉತ್ತರಿಸಿದ ಅವರು, ಈ ಬಾರಿ ಬದಲಾವಣೆ ಆಗುತ್ತದೆ ಅಂತ ಹೇಳಿದ್ದಾರೆ. ಈ ವಿಷಯ ಬಿಟ್ಟು ಬೇರೆ ಯಾವುದನ್ನೂ ಚರ್ಚೆ ಮಾಡಿಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಜೆಡಿಎಸ್‍ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ ಕುರಿತು ಮಾತನಾಡಿದ ಅವರು, ಈ ಬಾರಿ ಯಾರು ಯಾರಿಗೆ ಮತ ಹಾಕಿದರು ಅಂತ ಹೇಳುವುದಕ್ಕೆ ಆಗುತ್ತಿಲ್ಲ. ಈ ಬಾರಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಮೇ 23ರ ನಂತರ ಎಲ್ಲಾ ಉತ್ತರ ಸಿಗುತ್ತದೆ. ಈಗ ಬರುತ್ತಿರುವ ಚರ್ಚೆಗಳು ಸುಮ್ಮನೆ ಎಂದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮೈತ್ರಿ ಏನಿದ್ದರೂ ಲೋಕಸಭೆಗೆ ಮಾತ್ರ ಸೀಮಿತ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಹೋರಾಟ ಮಾಡಲಿದೆ. ಯಾರ ಜೊತೆಗೂ ದೋಸ್ತಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ರೆಸಾರ್ಟ್ ವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರೆಸಾರ್ಟ್ ನಲ್ಲಿಯೂ ದೇವಸ್ಥಾನಗಳಿವೆ. ಹಿರಣ್ಯಕಶಿಪು ಪ್ರಹ್ಲಾದನಿಗೆ ಈ ಕಂಬದಲ್ಲಿ ನಾರಾಯಣನಿದ್ದಾನೋ ಎಂದು ಕೇಳುತ್ತಾನೆ. ಎಲ್ಲೆಲ್ಲೂ ಇದ್ದಾನೆ ಎಂದು ಪ್ರಹ್ಲಾದ ಹೇಳುತ್ತಾನೆ. ಹಾಗೆಯೇ ರೆಸಾರ್ಟಿನ ಕಂಬ ಕಂಬದಲ್ಲೂ ದೇವರಿದ್ದಾನೆ ಎಂದು ಹೇಳಿ ನಗೆ ಬೀರಿದರು.
ಬಿಜೆಪಿಯವರು ದೇವಸ್ಥಾನದ ಗಿರಾಕಿಗಳು. ಅವರು ಬೆಳಗ್ಗೆ, ಸಂಜೆ ದೇವಸ್ಥಾನಕ್ಕೆ ಹೋಗುತ್ತಾರೆ. ಸಿಎಂ ಕುಮಾರಸ್ವಾಮಿ ಅವರು ಆಗೊಮ್ಮೆ, ಇಗೊಮ್ಮೆ ಹೋಗುತ್ತಾರೆ ಅಷ್ಟೇ. ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಅವರ ಟೆಂಪಲ್ ರನ್ ಸಮರ್ಥನೆ ನೀಡಿದರು.