ಮಂಡ್ಯ: ಇತ್ತೀಚೆಗಷ್ಟೇ ಮಾಜಿ ಸಂಸದ ಅಂಬರೀಶ್ ಕಾಲಿಗೆ ಬಿದ್ದು ತಮ್ಮ ಪರ ಪ್ರಚಾರ ಮಾಡುವಂತೆ ಮನವಿ ಮಾಡಿಕೊಂಡಿದ್ದ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ಮಂಡ್ಯದಲ್ಲಿ ಲೋಕಸಭೆಯ ಉಪಚುನಾವಣೆ ಪ್ರಚಾರ ಗರಿಗೆದರಿದ್ದು, ಇಂದು ಜಿಲ್ಲೆಯ ಸುರಭಿ ಹೋಟೆಲಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು. ಈ ಪತ್ರಿಕಾಗೋಷ್ಠಿಗೆ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ ಬೃಹತ್ ಹೂವಿನ ಮಾಲಾರ್ಪಣೆ ಮಾಡಿ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಅಂಬರೀಶ್ ಕಾಲಿಗೆ ಬಿದ್ದು ಕುತೂಹಲ ಮೂಡಿಸಿದ ಜೆಡಿಎಸ್ ಅಭ್ಯರ್ಥಿ!
ಸಿದ್ದರಾಮಯ್ಯ ಅವರಿಗೆ ತಯಾರಿಸಿದ್ದ ಹೂವಿನ ಹಾರವನ್ನು ಸುಮಾರು ಆರು ಜನ ಎತ್ತಿಕೊಂಡು ಬಂದು ಮಾಲಾರ್ಪಣೆ ಮಾಡಿದ್ದಾರೆ. ಈ ಮಾಲೆ ಗುಲಾಬಿ ಹೂವಿನ ಹಾರವಾಗಿದ್ದು, ಇದು ಸುಮಾರು 75 ಸಾವಿರ ಮೌಲ್ಯದ ಹೂವಿನ ಹಾರವಾಗಿದೆ. ಇದೇ ವೇಳೆ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಅವರು ಹಾರ ಹಾಕಿ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದಿದ್ದಾರೆ. ಕಾಂಗ್ರೆಸ್ ಮುಖಂಡರಾದ ಜಮೀರ್ ಅಹಮದ್, ಚಲುವರಾಯಸ್ವಾಮಿ, ರವಿಕುಮಾರ್‍ಗೌಡ ಸೇರಿದಂತೆ ಹಲವು ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇತ್ತೀಚೆಗೆ ಶಿವರಾಮೇಗೌಡರು ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ಮಾಜಿ ಸಂಸದ, ಮಾಜಿ ಸಚಿವ ಅಂಬರೀಶ್ ಅವರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ತಮಗೆ ಸಹಕಾರ ನೀಡುವಂತೆ ಹಾಗೂ ಮಂಡ್ಯಕ್ಕೆ ಆಗಮಿಸಿ ತಮ್ಮ ಪರ ಪ್ರಚಾರ ಮಾಡುವಂತೆ ಮನವಿ ಮಾಡಿದ್ದರು. ಈ ವೇಳೆ ಶಿವರಾಮೇಗೌಡ ಅವರು ಅಂಬರೀಶ್ ಅವರಿಗೆ ಶಾಲು, ಹಾರ ಹಾಕಿ ಸನ್ಮಾನ ಮಾಡಿ ಅವರ ಕಾಲಿಗೆ ಬಿದ್ದು, ಆಶೀರ್ವಾದವನ್ನು ಪಡೆದುಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv