ಬೆಂಗಳೂರು/ಹಾಸನ: ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಎದುರಾಗಿದೆ. ಸುಳ್ಳು ಅಫಿಡವಿಟ್ ಸಲ್ಲಿಕೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದೆ.
ಸುಳ್ಳು ಅಫಿಡವಿಟ್ ಬಗ್ಗೆ ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಆಯೋಗಕ್ಕೆ ದೂರು ನೀಡಿದ್ದರು. ಅಲ್ಲದೆ ಹಾಸನದಲ್ಲಿರೋ ಕಲ್ಯಾಣ ಮಂಟಪ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬಳಿ ಪಡೆದಿರೋ ಸಾಲದ ಬಗ್ಗೆ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ ಇದೀಗ ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಹಾಸನ ಚುನಾವಣಾ ಅಧಿಕಾರಿಗೆ ಆಯೋಗ ಸೂಚನೆ ನೀಡಿದೆ.
ಅಫಿಡವಿಟ್ ನಲ್ಲಿ ಪ್ರಜ್ವಲ್ 7 ಕೋಟಿಗೂ ಹೆಚ್ಚು ಆದಾಯ ತೋರಿಸಿದ್ದಾರೆ. ಆದರೆ ಕೇವಲ ಮೂರು ಕೋಟಿಯಷ್ಟು ಮಾತ್ರ ಆದಾಯದ ಮೂಲ ತೋರಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು 23 ಲಕ್ಷ ರೂ. ಪ್ರಜ್ವಲ್ ಗೆ ಸಾಲ ನೀಡಿರೋದಾಗಿ ಹೇಳಿದ್ದಾರೆ. ಆದರೆ ಪ್ರಜ್ವಲ್ ಅಫಿಡವಿಟ್ ನಲ್ಲಿ ಆ ಮಾಹಿತಿ ಹಾಕಿಲ್ಲ ಎಂದು ಎ ಮಂಜು ಆರೋಪಿಸಿದ್ದಾರೆ.
ಪ್ರಜ್ವಲ್ ಅಫಿಡವಿಟ್ ನಲ್ಲಿ ಗಂಭೀರ ಲೋಪವಾಗಿದೆ. ಅದಕ್ಕೆ ತಕ್ಕ ಬೆಲೆ ತರಬೇಕಾಗುತ್ತದೆ. ಈಗಾಗಲೇ ಈ ವಿಚಾರ ಚನಾವಣಾ ಆಯೋಗದಲ್ಲಿ ಸಾಬೀತಾಗುತ್ತದೆ. ದೇಶದಲ್ಲೇ ಇದು ದೊಡ್ಡ ಪ್ರಕರಣ ಆಗಲಿದೆ ಎಂದು ಎ ಮಂಜು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಜೆಡಿಎಸ್ ಮುಖಂಡ ವಿಶ್ವನಾಥ್ ಹಾಗೂ ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹಾಗೂ ಜೆಡಿಎಸ್‍ನ ಪ್ರಮುಖ ನಾಯಕರು ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ವಿಶ್ವನಾಥ್ ಅವರು ಸುಮ್ಮನೆ ಹೇಳಿಕೆ ನೀಡಲ್ಲ ಎಂದು ಅವರು ಹೇಳಿದರು.