– ಸುಮಲತಾ ಜೊತೆ ಊಟಕ್ಕೆ ಹೋದವರಿಗೆ ಪ್ರಶ್ನೆ ಮಾಡೋಕಾಗುತ್ತಾ?
– ಜಿ.ಟಿ.ದೇವೆಗೌಡ ಸತ್ಯ ಹೇಳಿದ್ದಾರೆ
ಮೈಸೂರು: ಮಂಡ್ಯದಲ್ಲಿ ಜೆಡಿಎಸ್ ಗೆಲ್ಲಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪತ್ರಕರ್ತರ ಪ್ರಶ್ನೆಗೆ ಯೋಚಿಸಿ ಉತ್ತರ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ, ಸುಮಲತಾ ಅಂಬರೀಶ್ ಅವರ ಜೊತೆಗೆ ಊಟಕ್ಕೆ ಹೋದ ಮಂಡ್ಯ ಕಾಂಗ್ರೆಸ್ ಮುಖಂಡರನ್ನು ಪ್ರಶ್ನೆ ಮಾಡುವುದಕ್ಕೆ ಆಗುತ್ತಾ? ಊಟಕ್ಕೆ ಹೋದವರ ವಿಚಾರವನ್ನು ನಾನು ಮಾತನಾಡಲು ಆಗುತ್ತಾ? ನೀವು ಎಲ್ಲೋ ಊಟಕ್ಕೆ ಹೋಗಿರುತ್ತೀರಿ, ಆಗ ನಿಮ್ಮ ಮಾಲೀಕರು ಪ್ರಶ್ನೆ ಮಾಡಿದರೆ ನಿಮಗೆ ಸರಿ ಅನಿಸುತ್ತಾ ಎಂದು ವರದಿಗಾರರಿಗೆ ಪ್ರಶ್ನಿಸುವ ಮೂಲಕ ಮಂಡ್ಯ ಕಾಂಗ್ರೆಸ್ ಮುಖಂಡರ ಪರ ಬ್ಯಾಟ್ ಬೀಸಿದರು.
ಸಚಿವ ಜಿ.ಟಿ.ದೇವೆಗೌಡರು ಸತ್ಯ ಹೇಳಿದ್ದಾರೆ. ಉದ್ಬೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು, ಮತದಾರರು ಬಿಜೆಪಿಗೆ ಮತ ಹಾಕಿರುವುದು ಸತ್ಯ. ಜೆಡಿಎಸ್‍ನವರು ಅಷ್ಟೇ ಅಲ್ಲ ಕಾಂಗ್ರೆಸ್ ಮತದಾರರೂ ಇದ್ದಾರೆ. ಅವರು ನಮ್ಮ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ಹೇಳಿದರು.
ಉದ್ಬೂರು ಉದಾಹರಣೆ ಇಡೀ ಕ್ಷೇತ್ರಕ್ಕೆ ಅನ್ವಯವಾಗುವುದಿಲ್ಲ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 18 ಲಕ್ಷ ಮತದಾರರಿದ್ದಾರೆ. ಎಲ್ಲರೂ ಬುದ್ಧಿವಂತರೇ, ನಾವು ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭ್ರಷ್ಟಚಾರದ ಪಟ್ಟಕಟ್ಟಿಕೊಂಡು ಮಾಜಿ ಪ್ರಧಾನಿ ರಾಜೀವ್ ಗಾಂಧಿ ನಿಧನವಾದರು ಎಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿ ಅವರು ಯಾವುದಾದರು ಸತ್ಯ ಹೇಳಿದ್ದಾರಾ? ಸುಳ್ಳನ್ನು ಮಾರ್ಕೆಟಿಂಗ್ ಮಾಡಿ 2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಅಧಿಕಾರಕ್ಕೆ ಬಂದರು. ಆದರೆ ಈ ಬಾರಿ ಸುಳ್ಳನ್ನ ಹೇಳಿ ಪ್ರಧಾನಿಯಾಗಲು ಸಾಧ್ಯವಿಲ್ಲ. ಸರ್ಜಿಕಲ್ ಸ್ಟ್ರೈಕ್ ಸತ್ಯ ಎನ್ನುತ್ತಾರೆ. ಪ್ರಧಾನಿ ಮೋದಿ ಗನ್ ಹಿಡಿದುಕೊಂಡು ಯುದ್ಧ ಮಾಡಲು ಹೋಗಿದ್ದರಾ ಎಂದು ಪ್ರಶ್ನಿಸಿದರು.