ಮಂಡ್ಯ: ಶ್ರೀರಂಗಪಟ್ಟಣ ದಸರಾದಲ್ಲಿ ಶಾಮಿಯಾನ ಹಾಕುವ ವಿಚಾರಕ್ಕೆ ಪಾಲಿಟಿಕ್ಸ್ ಶುರುವಾಗಿದ್ದು, ದಸರಾ ಶಾಮಿಯಾನದ ಜಗಳ ಬೀದಿಗೆ ಬಂದು ನಿಂತಿದೆ.
ಜೆಡಿಎಸ್ ಮತ್ತು ಬಿಜೆಪಿ ನಡುವೆ ಶಾಮಿಯಾನ ಹಾಕುವ ವಿಚಾರಕ್ಕೆ ಜಗಳ ನಡೆದಿದೆ. ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಮತ್ತು ಬಿಜೆಪಿ ಮುಖಂಡರ ನಡುವೆ ಶಾಮಿಯಾನ ಹಾಕುವ ವಿಚಾರಕ್ಕೆ ಜಿದ್ದಾಜಿದ್ದಿ ನಡೆದಿದೆ. ಒಂದೆಡೆ ಇಷ್ಟು ವರ್ಷ ದಸರಾಗೆ ನಾವು ಶಾಮಿಯಾನ ಹಾಕುತ್ತಿದ್ದೇವೆ ಎಂದು ಜೆಡಿಎಸ್ ಮುಖಂಡರು ಹೇಳುತ್ತಿದ್ದರೆ, ಆಗ ನೀವು ಹಾಕಿಸುತ್ತಾ ಇದ್ರಿ, ಈಗ ನಮ್ಮ ಸರ್ಕಾರ ಇದೆ. ಹೀಗಾಗಿ ಈ ಬಾರಿ ನಾವು ಹಾಕಿಸುತ್ತೇವೆ ಎಂದು ಬಿಜೆಪಿ ಮುಖಂಡರು ಶಾಮಿಯಾನ ಹಾಕಿಸಲು ಪಟ್ಟು ಹಿಡಿದು ಕುಳಿತಿದ್ದಾರೆ.
ಗುರುವಾರ ಶ್ರೀರಂಗಪಟ್ಟಣದಲ್ಲಿ ಶಾಮಿಯಾನ ವಿಚಾರಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಜೋರಾಗಿ ಜಗಳ ನಡೆದಿದ್ದು, ಎರಡು ಪಕ್ಷದವರೂ ಶಾಮಿಯಾನ ಲಾರಿಗಳನ್ನು ನಿಲ್ಲಿಸಿಕೊಂಡು ಗಲಾಟೆ ಮಾಡಿದ್ದಾರೆ. ನಮ್ಮವರೇ ಶಾಮಿಯಾನ ಹಾಕುತ್ತಾರೆ ಎಂದು ಜೆಡಿಎಸ್‍ನವರು, ಇಲ್ಲ ಈ ಸಲ ನಮ್ಮವರು ಹಾಕುತ್ತಾರೆ ಎಂದು ಬಿಜೆಪಿ ದಸರಾ ಶಾಮಿಯಾನ ವಿಚಾರಕ್ಕೂ ರಾಜಕೀಯ ಮಾಡುತ್ತಿದ್ದಾರೆ.