ಶಾಸಕ ಸ್ಥಾನಕ್ಕೆ ಜೆಡಿಎಸ್‌ನ ಶಿವಲಿಂಗೇಗೌಡ ರಾಜೀನಾಮೆ

Public TV
1 Min Read
shivalinge gowda resign

ಕಾರವಾರ: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸಿರುವ ಹೊತ್ತಲ್ಲೇ ಪಕ್ಷಾಂತರ ಪರ್ವ ಮತ್ತೆ ಶುರುವಾಗಿದೆ. ಜೆಡಿಎಸ್‌ (JDS) ಅರಸೀಕೆರೆ (Arsikere) ಶಾಸಕ ಶಿವಲಿಂಗೇಗೌಡ (Sivalinge Gowda) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಬೆಂಬಲಿಗರೊಂದಿಗೆ ತೆರಳಿದ ಶಿವಲಿಂಗೇಗೌಡರು ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ತಮ್ಮಯ್ಯ ವಿರುದ್ಧ ತಣ್ಣಗಾಗದ ಆಕ್ರೋಶ – ಕಾಫಿನಾಡಲ್ಲಿ ನಿಂತಿಲ್ಲ ಬಂಡಾಯದ ಕೂಗು

shivalinge gowda

ತಮ್ಮ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಅವರು, ಜೆಡಿಎಸ್ ನಾಯಕರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸರಿಹೋಗದ ಕಾರಣ ಪಕ್ಷ ಬಿಡುವಂತಾಗಿದೆ. ಎಂಎಲ್‌ಸಿ ಎಲೆಕ್ಷನ್‌ನಲ್ಲಿನ ವಿಷಯದಲ್ಲಿ ಆದ ಸಣ್ಣ ಭಿನ್ನಾಭಿಪ್ರಾಯ ರಾಜೀನಾಮೆ ಕೊಡುವಂತಾಗಿದೆ. ಕಾರ್ಯಕರ್ತರ ಅಭಿಪ್ರಾಯದಂತೆ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತಿದ್ದೇನೆ ಎಂದು ತಿಳಿಸಿದರು.

ರಾಜಕೀಯದಲ್ಲಿ ಯಾರು ಬೇಕಾದರೂ ಪಕ್ಷಾಂತರ ಮಾಡುತ್ತಾರೆ. ಅಣ್ಣ-ತಮ್ಮಂದಿರೇ ಬೇರೆ ಆಗುತ್ತಾರೆ. ನಾನು ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿದ್ದಕ್ಕೆ ಅವರು ತಪ್ಪು ತಿಳಿದುಕೊಳ್ಳಬಾರದು. ಎಷ್ಟು ದಿನ ಋಣ ಇತ್ತೋ ಅಷ್ಟು ದಿನ ಇದ್ದೆವು. ಋಣ ತೀರಿತು, ಈಗ ನಮ್ಮ ಕ್ಷೇತ್ರದ ಜನ ಹೇಳಿದಂತೆ ರಾಜೀನಾಮೆ ಕೊಟ್ಟು ಹೋಗಿದ್ದೇವೆ. ಯಾರಾದರೂ ಸವಾಲು ಹಾಕಲಿ, ಏನಾದ್ರೂ ಮಾಡಲಿ. ನಾನು ಸವಾಲು ಹಾಕುವುದಿಲ್ಲ. ಏನೂ ಮಾಡುವುದಿಲ್ಲ. ಎಲ್ಲವನ್ನೂ ಕ್ಷೇತ್ರದ ಜನಕ್ಕೆ ಬಿಡುತ್ತೇನೆ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ರೇಣುಕಾಚಾರ್ಯಗೆ ಶಾಕ್ – ನೀತಿ ಸಂಹಿತೆ ಉಲ್ಲಂಘನೆ ಕೇಸ್?

shivalinge gowda resign1

ಕಾಂಗ್ರೆಸ್‌ನಲ್ಲಿ ನನಗೇ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಘೋಷಣೆ ಆಗಲಿದೆ. ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬರುವ ನಾಯಕ ನನ್ನ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದರು.

ಜೆಡಿಎಸ್‌ ತೊರೆದಿದ್ದ ಅರಕಲಗೂಡು ಎ.ಟಿ. ರಾಮಸ್ವಾಮಿ ಶನಿವಾರ ಬಿಜೆಪಿ ಸೇರ್ಪಡೆಗೊಂಡರು. ಇವರ ಬೆನ್ನಲ್ಲೇ ಶಿವಲಿಂಗೇಗೌಡ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುವ ಬಗ್ಗೆಯೂ ಮಾತನಾಡಿದ್ದಾರೆ.

Share This Article