Bengaluru CityKarnatakaLatestLeading NewsMain Post

ರಾಷ್ಟ್ರಪತಿ ಚುನಾವಣೆ NDA ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ಅಧಿಕೃತ ಘೋಷಣೆ

Advertisements

ಬೆಂಗಳೂರು: ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಪಕ್ಷ ರಾಜಕಾರಣವನ್ನು ಮೀರಿ ಬೆಂಬಲ ನೀಡಲು ಜಾತ್ಯತೀತ ಜನತಾದಳ ಸರ್ವಾನುಮತದ ನಿರ್ಣಯ ಕೈಗೊಂಡಿದೆ.

ವಿಧಾನಸೌಧದಲ್ಲಿ ಇಂದು ನಡೆದ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಅವರು ಮಾಧ್ಯಮಗಳಿಗೆ ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಅಹಿಂದ ಜಪಕ್ಕೆ ಟಕ್ಕರ್ ಕೊಡಲು ಮುಂದಾದ ಬಿಜೆಪಿ

ಕೋವಿಡ್ ಪಾಸಿಟಿವ್ ಕಾರಣಕ್ಕೆ ಹೋಮ್ ಐಸೋಲೇಷನ್ ಆಗಿರುವ ಶಾಸಕಾಂಗ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಗೂ ತಮ್ಮ ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಮಳೆ, ನೆರೆ ಕಾರಣಕ್ಕೆ ತಮ್ಮ ಕ್ಷೇತ್ರಗಳಲ್ಲಿಯೇ ಬೀಡುಬಿಟ್ಟಿರುವ ಪಕ್ಷದ ಎಲ್ಲ ಶಾಸಕರು ವರ್ಚುಯಲ್ ವೇದಿಕೆ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ಅವರು ಮಾಹಿತಿ ನೀಡಿದರು.

ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಮಹಿಳೆಯರಿಗೆ ಮೀಸಲು ಸೌಲಭ್ಯ ಕಲ್ಪಿಸಿ ಮಹಿಳಾ ಸಬಲೀಕರಣಕ್ಕೆ ಐತಿಹಾಸಿಕ ಒತ್ತು ನೀಡಿದ್ದರು. ಮೊತ್ತ ಮೊದಲ ಬಾರಿಗೆ ಆದಿವಾಸಿ ಮಹಿಳೆಯೊಬ್ಬರು ರಾಷ್ಟ್ರಪತಿ ಆಗುತ್ತಿರುವುದು ಹೆಮ್ಮೆಯ ಸಂಗತಿ. ಇದು ದೇವೇಗೌಡರ ಆಶಯಕ್ಕೆ ಅನುಗುಣವಾಗಿದೆ. ಮುರ್ಮು ಅವರ ಹಿನ್ನೆಲೆ, ಅವರು ಪ್ರತಿನಿಧಿಸುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಬೆಂಬಲ ನೀಡಲಾಗುತ್ತಿದೆ. ಇದರಲ್ಲಿ ಆ ಪಕ್ಷ ಈ ಪಕ್ಷ ಎನ್ನುವ ಮಾತಿಲ್ಲ. ಅಭ್ಯರ್ಥಿಯನ್ನು ಮಾನದಂಡವಾಗಿಟ್ಟುಕೊಂಡು ಬೆಂಬಲ ಘೋಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ನೂಪುರ್ ಶರ್ಮಾ ಫೋಟೋ ಅಪ್ಲೋಡ್ ಮಾಡಿದ್ದ ಉದ್ಯಮಿಗೆ ಕೊಲೆ ಬೆದರಿಕೆ – ಮೂವರ ಬಂಧನ

ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದ ಮರುದಿನವೇ ನಮ್ಮ ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡರಿಗೆ ದೂರವಾಣಿ ಕರೆ ಮಾಡಿ ಬೆಂಬಲ ಯಾಚಿಸಿದ್ದರು. ತದನಂತರ ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಖುದ್ದು ಅವರೇ ತೆರಳಿ ದೇವೇಗೌಡರು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮತ ಕೇಳಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡಲು ತೀರ್ಮಾನ ಕೈಗೊಂಡಿದೆ ಎಂದು ಬಂಡೆಪ್ಪ ಕಾಶಂಪೂರ್ ತಿಳಿಸಿದರು. ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ‌ ದ್ರೌಪದಿ ಮುರ್ಮು ಅವರಿಗೇ ಮತ ಹಾಕುತ್ತೇವೆ ಎಂದು ಅವರು ತಿಳಿಸಿದರು.

Live Tv

Leave a Reply

Your email address will not be published.

Back to top button