ಮೈಸೂರು: ರಾಜಕೀಯದಲ್ಲಿ ಕುಸ್ತಿ ಆಡುವ ಜೆಡಿಎಸ್, ಬಿಜೆಪಿ ನಾಯಕರು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹಲವು ಕಾರ್ಯಕ್ರಮಗಳಲ್ಲಿ ಒಂದೇ ಕಾರಿನಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ಓಡಾಡಿದ್ದಾರೆ.
ಹೌದು. ಮೈಸೂರು- ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಜಿ.ಟಿ ದೇವೇಗೌಡ, ಸಚಿವ ಸಾ.ರಾ.ಮಹೇಶ್ ಜೊತೆಯಾಗಿ ಓಡಾಟ ನಡೆಸಿದ್ದಾರೆ. ಅದರಲ್ಲೂ ಒಂದೇ ಕಾರಿನಲ್ಲಿ ಜೆಡಿಎಸ್, ಬಿಜೆಪಿ ನಾಯಕರು ಪ್ರಯಾಣಿಸುತ್ತಿರುವುದು ವಿಶೇಷವಾಗಿದೆ. ಮೈಸೂರಿನಲ್ಲಿ ಇಂದು ಹಲವು ಕಾರ್ಯಕ್ರಮದಲ್ಲಿ ನಾಯಕರು ಒಟ್ಟಿಗೆ ಪಾಲ್ಗೊಂಡಿರುವುದು ರಾಜಕೀಯ ವಲಯದಲ್ಲಿ ಹುಬ್ಬೇರುವಂತೆ ಮಾಡಿದೆ.
Advertisement
Advertisement
ಬೆಳಗ್ಗೆ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕ್ರಮದಲ್ಲಿ ಜಿಟಿಡಿ ಹಾಗೂ ಪ್ರತಾಪ್ ಸಿಂಹ ಭಾಗಿಯಾಗಿದ್ದರು. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರಾದ ರಾಮದಾಸ್, ನಾಗೇಂದ್ರ ಅವರು ಸಹ ನಾಯಕರಿಗೆ ಸಾಥ್ ನೀಡಿದ್ದರು.
Advertisement
ಲೋಕಸಭಾ ಚುನಾವಣೆಯ ಸಮಯದಲ್ಲಿ ದೋಸ್ತಿ ಅಭ್ಯರ್ಥಿಯಾಗಿ ಮೈಸೂರಿನಿಂದ ಕಾಂಗ್ರೆಸ್ಸಿನ ವಿಜಯಶಂಕರ್ ಕಣಕ್ಕೆ ಇಳಿದಾಗ ಸಿಂಹ ವಿರುದ್ಧ ಜೆಡಿಎಸ್ ನಾಯಕರು ಪ್ರಚಾರ ನಡೆಸಿದ್ದರು. ಈಗ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿರುವುದು ಅಚ್ಚರಿ ಮೂಡಿಸಿದೆ.
Advertisement
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್.ವಿಶ್ವನಾಥ್ ರಾಜೀನಾಮೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿ.ಟಿ.ದೇವೆಗೌಡ ಅವರು, ವಿಶ್ವನಾಥ್ ರಾಜೀನಾಮೆ ಬಗ್ಗೆ ನನಗೆ ಮಾಹಿತಿ ಇಲ್ಲ. ಇವತ್ತು ಜೆಡಿಎಸ್ ಪಕ್ಷದ ಸಭೆ ಇದೆ. ಮೈಸೂರು ಕಾರ್ಯಕ್ರಮಗಳನ್ನು ಮುಗಿಸಿ ಬೆಂಗಳೂರಿಗೆ ತೆರಳುತ್ತೇನೆ. ವಿಶ್ವನಾಥ್ ಹಾಗೂ ಪಕ್ಷದ ವರಿಷ್ಠರ ಜೊತೆ ಮಾತನಾಡುತ್ತೇನೆ. ನಂತರ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಇದೇ ವಿಚಾರವಾಗಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ನಾನು ದೂರವಾಣಿಯಲ್ಲಿ ವಿಶ್ವನಾಥ್ ಜೊತೆ ಮಾತನಾಡಿದ್ದೇನೆ. ನೀವು ಬಂದ ಮೇಲೆ ಪಕ್ಷ ಸಂಘಟನೆ ಚೆನ್ನಾಗಿ ನಡೆದಿದೆ. ನೀವು ರಾಜೀನಾಮೆ ಕೊಡಬಾರದು ಎಂದು ಮನವಿ ಮಾಡಿದ್ದೇನೆ. ನಿಮ್ಮ ಮಾರ್ಗದರ್ಶನದಲ್ಲಿ ಜೆಡಿಎಸ್ ಮುನ್ನಡೆಸಬೇಕು ಎಂದು ಕೇಳಿದ್ದೇನೆ. ಅವರು ರಾಜ್ಯಾಧ್ಯಕ್ಷರಾಗಿ ಮುಂದುವರೆಯುವ ವಿಶ್ವಾಸವಿದೆ ಎಂದು ಹೇಳಿದರು.