ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನಾಳೆ ಭಾರತಕ್ಕೆ ಭೇಟಿ – ಪ್ರಧಾನಿ ಮೋದಿಯಿಂದ ವಿಶೇಷ ಔತಣಕ್ಕೆ ಸಿದ್ಧತೆ

Public TV
2 Min Read
JD Vance And PM Modi

– ನಾಲ್ಕು ದಿನಗಳ ಭಾರತ ಪ್ರವಾಸ, ದ್ವೀಪಕ್ಷಿಯ ಮಾತುಕತೆ

ನವದೆಹಲಿ: ಅಮೆರಿಕದ (America) ಸುಂಕ ಸಮರದ ನಡುವೆ ಯುಎಸ್‌ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ (US Vice President JD Vance) ಮತ್ತು ಅವರ ಭಾರತೀಯ ಮೂಲದ ಪತ್ನಿ ಉಷಾ ವ್ಯಾನ್ಸ್ ಏಪ್ರಿಲ್​ 21ರಿಂದ (ನಾಳೆಯಿಂದ) ನಾಲ್ಕು ದಿನಗಳ ಭಾರತದ ಪ್ರವಾಸ ಕೈಗೊಂಡಿದ್ದಾರೆ. ಇದು ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಭಾರತದ ಮೊದಲ ಭೇಟಿಯಾಗಿದೆ.

ವ್ಯಾನ್ಸ್ ಅವರು ತಮ್ಮ ಭಾರತೀಯ ಮೂಲದ ಪತ್ನಿ ಉಷಾ (Usha) ಮತ್ತು ಮೂವರು ಮಕ್ಕಳಾದ ಇವಾನ್, ವಿವೇಕ್ ಮತ್ತು ಮಿರಾಬೆಲ್ ಸೋಮವಾರ ಭಾರತಕ್ಕೆ ಬರಲಿದ್ದಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ದೆಹಲಿಯ ಪಾಲಂ ಏರ್‌ಪೋರ್ಟ್‌ಗೆ ಬಂದಿಳಿಯಲಿದ್ದು, ಕೇಂದ್ರದ ಹಿರಿಯ ಸಚಿವರು ರಾಜಸ್ಥಾನಿ ಶೈಲಿಯಲ್ಲಿ ವ್ಯಾನ್ಸ್‌ ಕುಟುಂಬವನ್ನು ಸ್ವಾಗತಿಸಲಿದ್ದಾರೆ. ಬಳಿಕ ದೆಹಲಿ ಜೊತೆಗೆ ಜೈಪುರ ಮತ್ತು ಆಗ್ರಾಕ್ಕೆ ವ್ಯಾನ್ಸ್‌ ಪ್ರಯಾಣಿಸಲಿದ್ದಾರೆ. ಈ ಸಂದರ್ಭದಲ್ಲಿ ಪೆಂಟಗನ್‌ನ ಐವರು ಹಿರಿಯ ಅಧಿಕಾರಿಗಳು ವ್ಯಾನ್ಸ್‌ ಜೊತೆಗಿರಲಿದ್ದಾರೆ. ಇದನ್ನೂ ಓದಿ: ಸುಂಕ ಸಮರದ ನಡುವೆ ಯುಎಸ್‌ ಅಧ್ಯಕ್ಷರನ್ನ ಭೇಟಿಯಾದ ಇಟಲಿ ಪ್ರಧಾನಿ – ಮೆಲೊನಿ ಶ್ರೇಷ್ಠ ಪ್ರಧಾನಿ ಎಂದ ಟ್ರಂಪ್‌

JD Vance Usha Vance

ಏನೇನು ಕಾರ್ಯಕ್ರಮ?
ದೆಹಲಿಗೆ ಬಂದ ಕೆಲ ಗಂಟೆಗಳ ಬಳಿಕ ವ್ಯಾನ್ಸ್ ಮತ್ತು ಅವರ ಕುಟುಂಬ ಸ್ವಾಮಿನಾರಾಯಣ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಲಿದೆ. ಜೊತೆಗೆ ಸಾಂಪ್ರದಾಯಿಕ ಭಾರತೀಯ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಶಾಪಿಂಗ್ ಕಾಂಪ್ಲೆಕ್ಸ್‌ ಭೇಟಿ ನೀಡಲಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಸೋಮವಾರ ಸಂಜೆ 6:30ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾರತ-ಯುಎಸ್‌ ದ್ವಿಪಕ್ಷೀಯ ಮಾತುಕತೆ, ವ್ಯಾಪಾರ ಒಪ್ಪಂದಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಭಾರತದ ಮೇಲಿನ ಸುಂಕದ ಬಗ್ಗೆಯೂ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಉಪಸ್ಥಿತರಿರಲಿದ್ದಾರೆ.

Tajmahal

ಅದ್ಧೂರಿ ಭೋಜನ ಕೂಟ:
ದ್ವಿಪಕ್ಷೀಯ ಮಾತುಕತೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ವ್ಯಾನ್ಸ್‌ ಕುಟುಂಬ ಮತ್ತು ಅವರ ಜೊತೆಗಿರುವ ಅಮೆರಿಕದ ಅಧಿಕಾರಿಗಳುಗೆ ವಿಶೇಷ ಔತಣಕೂಟ ಆಯೋಜಿಸಲಿದ್ದಾರೆ. ಔತಣ ಕೂಟದ ಬಳಿಕ ವ್ಯಾನ್ಸ್‌ ಜೈಪುರಕ್ಕೆ ತೆರಳಲಿದ್ದು, ಐಟಿಸಿ ಮೌರ್ಯ ಶೆರಾಟನ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇದನ್ನೂ ಓದಿ: ಯುಎಸ್-ಚೀನಾ ಟಾರಿಫ್ ವಾರ್ ಮತ್ತಷ್ಟು ಜೋರು – ಚೀನಾ ಉತ್ಪನ್ನಗಳಿಗೆ 245% ಸುಂಕ ವಿಧಿಸಿದ ಅಮೆರಿಕ

ಏ.22ರಂದು ವ್ಯಾನ್ಸ್​ ಕೈಗಾರಿಕಾ ನಾಯಕರು, ಶಿಕ್ಷಣ ತಜ್ಞರು, ರಾಜತಾಂತ್ರಿಕರು, ವಿದೇಶಾಂಗ ನೀತಿ ತಜ್ಞರು ಮತ್ತು ಭಾರತೀಯ ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಜೈಪುರ ಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ (ಜೆಇಸಿಸಿ) ನಡೆದ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಇಲ್ಲಿನ ಐತಿಹಾಸಿಕ ತಾಣಗಳಿಗೆ ಭೇಟಿ ನೀಡಲಿದ್ದಾರೆ.

narendra modi trump

ಏ.23ರಂದು ಆಗ್ರಾಕ್ಕೆ ಭೇಟಿ ನೀಡಿ, ವಿಶ್ವಪ್ರಸಿದ್ಧ ತಾಜ್‌ ಮಹಲ್‌, ಶಿಲ್ಪಗ್ರಾಮ್‌ ಹಾಗೂ ವಿವಿಧ ಭಾರತೀಯ ಕಲಾಕೃತಿಗಳನ್ನು ಪ್ರದರ್ಶಿರುವ ಎಂಪೋರಿಯಮ್‌ ವೀಕ್ಷಣೆ ಮಾಡಲಿದ್ದಾರೆ. ಏಪ್ರಿಲ್‌ 24ರಂದು ಜೈಪುರದಿಂದ ನೇರವಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಇದನ್ನೂ ಓದಿ: ವಾಹನ ಕಂಪನಿಗಳಿಗೆ ತಾತ್ಕಾಲಿಕ ವಿನಾಯತಿ – ಟ್ರಂಪ್‌ ಯೂಟರ್ನ್‌

Share This Article