– ಜಯನಗರ ಸಂಘಟನೆಗಳಿಂದ ʻನಮ್ಮ ತೆರಿಗೆ ನಮ್ಮ ಹಕ್ಕುʼ ಹೋರಾಟ
ಬೆಂಗಳೂರು: ಕ್ಷೇತ್ರಕ್ಕೆ ಅನುದಾನ ನೀಡದ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಜಯನಗರ (Jayanagara) ನಿವಾಸಿಗಳ ಆಕ್ರೋಶದ ಕಟ್ಟೆಯೊಡೆದಿದೆ. ಈ ಅನ್ಯಾಯ ಖಂಡಿಸಿ ಜಯನಗರ ಕ್ಷೇತ್ರದ ನಾಗರೀಕ ಸಂಘ ಸಂಸ್ಥೆಗಳ ಒಕ್ಕೂಟವು ʻನಮ್ಮ ತೆರಿಗೆ ನಮ್ಮ ಹಕ್ಕುʼ ಘೋಷವಾಕ್ಯದ ಅಡಿಯಲ್ಲಿ ಸಭೆ ಹಮ್ಮಿಕೊಂಡಿದೆ. ಕ್ಷೇತ್ರದ ಶಾಸಕ ಸಿ.ಕೆ ರಾಮಮೂರ್ತಿ ಅವರು ಸಭೆಯ ನೇತೃತ್ವ ವಹಿಸಿದ್ದು, ಕ್ಷೇತ್ರಕ್ಕೆ ಅನುದಾನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಟಿ ತಾರಾ ಅನುರಾಧ (Tara Anuradha) ಸಹ ಅನುದಾನಕ್ಕೆ ಆಗ್ರಹಿಸಿದ್ದಾರೆ.
Advertisement
ಸಭೆಯನ್ನುದ್ದೇಶಿಸಿ ಮಾತನಾಡಿದ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ (CK Ramamurthy), 72 ಸಂಘಟನೆಗಳು ಸೇರಿ ಸಭೆ ಮಾಡಿದ್ದೇವೆ. ಅನುದಾನಕ್ಕೆ ಹಕ್ಕೋತ್ತಾಯ ಮಾಡಲು ನಾವು ನಿರ್ಣಯ ತೆಗೆದುಕೊಂಡಿದ್ದೇವೆ. ನಮ್ಮ ಉದ್ದೇಶ, ಸರ್ವರಿಗೂ ಸಮಪಾಲು ಸಮಬಾಳು.. ಅದರಂತೆ ಜಯನಗರಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ತೆರಿಗೆ ನನ್ನ ಹಕ್ಕು – ಡಿಕೆಶಿ ವಿರುದ್ಧ ಸಿಡಿದ ಜಯನಗರ ಜನತೆ, ಭಾನುವಾರ ಉಗ್ರ ಹೋರಾಟ
Advertisement
Advertisement
ಇದು ಮೊದಲ ಹಂತದ ಹೋರಾಟ. ನಾವು ಮನವಿ ಸಲ್ಲಿಸುತ್ತೇವೆ, ಅವರು ಏನ್ ಕ್ರಮ ತೆಗೆದುಕೊಳ್ಳುತ್ತಾರೆ ಅನ್ನೋದು ನೋಡಬೇಕು. ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನಾನು ವೈಯಕ್ತಿಕವಾಗಿ ಮನವಿ ಮಾಡುತ್ತೇನೆ, ಅವರು ಸೀನಿಯರ್ ಇದ್ದಾರೆ. ಅಭಿವೃದ್ಧಿ ಆಗಬೇಕು, ಆದ್ರೆ ಎಲ್ಲರಿಗೂ ಅನುದಾನ ಕೊಟ್ಟು ನಮಗೆ ಮಾತ್ರ ಕೊಟ್ಟುಲ್ಲ ಅಂದ್ರೆ ಹೇಗೆ? ಬ್ರ‍್ಯಾಂಡ್ ಬೆಂಗಳೂರು ಹೇಗಾಗುತ್ತದೆ? ಕ್ಷೇತ್ರದಲ್ಲಿ ರಸ್ತೆ ಹಾಳಾಗಿದೆ, 4ನೇ ಬಡಾವಣೆ ಕಾಂಪ್ಲೆಕ್ಸ್ ಸ್ಥಿತಿ ಹದಗೆಟ್ಟಿದೆ. ಜಯನಗರಕ್ಕೆ ಕರೆದರೂ ಡಿಸಿಎಂ ಬಂದಿಲ್ಲ. ನೀವು ಬೆಂಗಳೂರು ನಗರಾಭಿವೃದ್ಧಿ ಸಚಿವರು ಅದಕ್ಕೆ ಕೇಳಿದ್ದು, ಮತ್ತಿನ್ಯಾರನ್ನ ಕೇಳಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
Advertisement
ಜಯನಗರ ಕ್ಷೇತ್ರಕ್ಕೆ 10 ಕೋಟಿ ಅನುದಾನ ತಕ್ಷಣವೇ ಬಿಡುಗಡೆ ಮಾಡಬೇಕು. ನಾನು ಉಪಮುಖ್ಯಮಂತ್ರಿಗಳನ್ನ ಭೇಟಿ ಮಾಡುತ್ತೇನೆ. ಸದ್ಯ ಅವರು ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಇದ್ದಾರೆ. ಎಲ್ಲ ಒಕ್ಕೂಟ ಸೇರಿ ಭೇಟಿ ಮಾಡಿ ಮನವಿ ಮಾಡುತ್ತೇನೆ. ಮತ್ತೊಂದು ಸಭೆ ಕರೆಯುತ್ತೇವೆ. ಮತದಾರರ ಮುಂದೆ ನಾನು ತಲೆಬಾಗಬೇಕು. ಡಿಕೆ ಶಿವಕುಮಾರ್ ಅವರು ನಮಗೆ ತಗ್ಗಿ ಬಗ್ಗಿ ಇರಬೇಕು ಎಂದಿದ್ದಾರೆ. ನಾವು ಅದೇ ರೀತಿ ನಡೆದುಕೊಳ್ಳುತ್ತೇವೆ, ನಾನು ಯಾರಿಗೆ ತಗ್ಗಿ ಬಗ್ಗಿ ನಡೀಬೇಕು ಎಂದು ಹೇಳಿದ್ದಾರೋ ಅದೇ ರೀತಿ ಇರ್ತೀನಿ. ಡಿಸಿಎಂ ಅವರು ದೊಡ್ಡವರು ನಾವು ಚಿಕ್ಕವರು, ಹೀಗಾಗಿ ಅವರು ನಮಗೆ ಅನುದಾನ ನೀಡಲಿ ಎಂದು ಮನವಿ ಮಾಡುತ್ತೇನೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ರಾಜಕೀಯ ಏನಾದ್ರೂ ಇರಲಿ, ಜಯನಗರಕ್ಕೆ ಅನುದಾನ ಕೊಡಿ – ಡಿಕೆಶಿಗೆ ಸೆಲೆಬ್ರಿಟಿಗಳ ಮನವಿ
ಏನಿದು ಅನುದಾನ ಜಟಾಪಟಿ?
ಕಳೆದ ಅಕ್ಟೋಬರ್ ಕೊನೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನ 27 ವಿಧಾನಸಭಾ ಕ್ಷೇತ್ರಗಳಿಗೆ ತಲಾ 10 ಕೋಟಿ ರೂ.ನಂತೆ 270 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ ಈ ಪಟ್ಟಿಯಿಂದ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಪ್ರತಿನಿಧಿಸುವ ಜಯನಗರ ಕ್ಷೇತ್ರವನ್ನು ಹೊರಗಿಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ.
ವಿಧಾನಸಭೆಯಲ್ಲಿ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಶಾಸಕ ಸಿ.ಕೆ.ರಾಮಮೂರ್ತಿ ಮಾತಾಡಿದ್ದರು ಎಂಬ ಕಾರಣಕ್ಕೆ ಜಯನಗರಕ್ಕೆ ಅನುದಾನ ನೀಡಿಲ್ಲ ಎಂದು ಹೇಳಲಾಗಿದೆ. ಇದು ವ್ಯಾಪಕ ಟೀಕೆ, ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇದು ಸೇಡಿನ ಕ್ರಮ, ಕಾಂಗ್ರೆಸ್‌ಗೆ ಮತ ಹಾಕದ ನಾಗರಿಕರನ್ನು ಈ ಸರ್ಕಾರ ಶಿಕ್ಷಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಪೂರಕವಾಗಿ ಡಿಸಿಎಂ ಮಾತಾಡಿದ್ದು, ನಾನೇ ಉದ್ದೇಶಪೂರ್ವಕವಾಗಿ ಜಯನಗರಕ್ಕೆ ಅನುದಾನ ಕೊಟ್ಟಿಲ್ಲ ಎಂದಿದ್ದಾರೆ. ಈ ಮೂಲಕ ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಸರ್ಕಾರದ ಮೇಲಿನ ಹೊರೆ ತಪ್ಪಿಸಲು 11 ಲಕ್ಷ ಬಿಪಿಎಲ್ ಕಾರ್ಡ್‌ಗಳು ಎಪಿಎಲ್‌ಗೆ ಶಿಫ್ಟ್: ಹೆಚ್‌ಡಿಕೆ ಬಾಂಬ್
ನಾಗಸಂದ್ರದಿಂದ ಮಾದಾವರ ಮೆಟ್ರೋ ಸೇವೆ ಲೋಕಾರ್ಪಣೆಗೂ ಮುನ್ನ ಡಿಕೆ ಶಿವಕುಮಾರ್ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಜೊತೆಯಾಗಿ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಅವರು ಜಯನಗರದ ಅನುದಾನ ವಿಚಾರವನ್ನು ಪ್ರಸ್ತಾಪಿಸಿ ಮನವಿ ಮಾಡಿದ್ದರು. ಈ ವೇಳೆ, ನಾನು ಬಂದ ಮೇಲೆ ಬೆಂಗಳೂರು ಅಧೋಗತಿ ಆಗೋಯ್ತು ಎಂದು ಅವನು (ಜಯನಗರ ಶಾಸಕ ರಾಮಮೂರ್ತಿ) ಹೇಳಿಕೆಯನ್ನು ನೀಡಿದ್ದ. ನನ್ನ ಜೊತೆ ಮಾತನಾಡಬೇಕಾದರೆ ತಗ್ಗಿಬಗ್ಗಿ ಇರಬೇಕು. ಬೇರೆಯವರ ಜೊತೆಗೆ ಇದ್ದಂತೆ ಇದ್ದರೆ ಆಗುವುದಿಲ್ಲ ಎಂದು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.