ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ (2A Reservation) ಕೊಡುವ ಸಂಬಂಧ ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ. ಈ ಹಿನ್ನೆಲೆ ಮತ್ತೆ ಹೋರಾಟ ರೂಪಿಸುವ ಸಂಬಂಧ ಜಯ ಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಸುಳಿವು ನೀಡಿದ್ದಾರೆ.
•ಪ್ರವರ್ಗ-2ಎ ಅಡಿ ಮೀಸಲಾತಿ ಒದಗಿಸುವಂತೆ ಪಂಚಮಸಾಲಿ ಲಿಂಗಾಯತ ಸಮುದಾಯದ ಬೇಡಿಕೆ ಕುರಿತು ಕಾನೂನು ಪ್ರಕಾರ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಾಗುವುದು.
•ಸರ್ಕಾರ ಮೀಸಲಾತಿ ವಿಷಯದಲ್ಲಿ ಮುಕ್ತಮನಸ್ಸು ಹೊಂದಿದೆ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಎಲ್ಲಾ ದುರ್ಬಲ ವರ್ಗದವರಿಗೂ ನ್ಯಾಯ ದೊರೆಯಬೇಕು ಎಂಬುವುದು… pic.twitter.com/W8IIej7HG1
— Siddaramaiah (@siddaramaiah) October 18, 2024
ಗೃಹ ಕಚೇರಿ ಕೃಷ್ಣದಲ್ಲಿಂದು ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ನಿಯೋಗ ಸಿಎಂ ಸಿದ್ದರಾಮಯ್ಯ (Siddaramaiah) ಜೊತೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿತು. ಸಭೆಯಲ್ಲಿ 2A ಮೀಸಲಾತಿ ನೀಡುವ ಸಂಬಂಧ ಯಾವುದೇ ಭರವಸೆ ಜಯ ಮೃತ್ಯುಂಜಯ ಸ್ವಾಮೀಜಿ ನಿಯೋಗಕ್ಕೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಹಣಕಾಸು ವಹಿವಾಟು ನಡೆದಿಲ್ಲ, ಹಣಕಾಸಿನ ವಿಚಾರ ಎಲ್ಲೂ ತನಿಖೆಯಾಗಿಲ್ಲ: ಡಿ.ಕೆ.ಸುರೇಶ್
ಸಭೆ ಬಳಿಕ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ಸಿಎಂ ಅವರು ನಮ್ಮ ಬಳಿ ಒಂದೂವರೆ ಗಂಟೆ ಸಭೆ ಮಾಡಿದ್ರು. ನಾವು 2A ಮೀಸಲಾತಿ ಕೊಡಿ ಇಲ್ಲದೇ ಹೋದ್ರೆ ಬಿಜೆಪಿ ತಂದಿದ್ದ 2D ಮೀಸಲಾತಿಯಾದ್ರೂ ಕೊಡಿ ಅಂತ ಮನವಿ ಮಾಡಿದ್ವಿ. ಇದಲ್ಲದೇ ಲಿಂಗಾಯತರನ್ನ ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ಕೇಂದ್ರಕ್ಕೆ ಶಿಫಾರಸು ಆದ್ರು ಮಾಡಿ ಅಂತ ಮನವಿ ಮಾಡಿದ್ವಿ. ಆದರೆ ಸಿಎಂ ಅವರು ಚುನಾವಣೆ ನೀತಿ ಸಂಹಿತೆ ಇದೆ. ಈಗ ಏನು ಹೇಳೊಲ್ಲ ಅಂತ ಹೇಳಿದ್ದಾರೆ. ಒಬಿಸಿ ಬಗ್ಗೆಯೂ ಭರವಸೆ ಕೊಟ್ಟಿಲ್ಲ. 2A ಮೀಸಲಾತಿ ಬಗ್ಗೆಯೂ ಯಾವುದೇ ಸ್ಪಷ್ಟವಾದ ನಿರ್ಧಾರ ಹೇಳಿಲ್ಲ. ಈ ಸಭೆ ನಮಗೆ ಸಮಾಧಾನ ತಂದಿಲ್ಲ. ಹೀಗಾಗಿ ಮುಂದಿನ ಹೋರಾಟ ರೂಪಿಸೋದಾಗಿ ತಿಳಿಸಿದರು.
ಇನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಒಂದೂವರೆ ಗಂಟೆ ಸಿಎಂ ಎಲ್ಲಾ ಸಮಸ್ಯೆ ಆಲಿಸಿದ್ದಾರೆ. ಏನೇನು ಆಗಬೇಕು ಸಹಾಯ ಮಾಡೋದಾಗಿ ಹೇಳಿದ್ದಾರೆ. ನೀತಿ ಸಂಹಿತೆ ಇರೋದ್ರೀಂದ ಏನು ಮಾಡೋಕೆ ಬರೊಲ್ಲ ಅಂತ ಹೇಳಿದ್ದಾರೆ ಅಂತ ತಿಳಿಸಿದರು. ನೀತಿ ಸಂಹಿತೆ ಬರೋ ಮುನ್ನ ಸಭೆ ನಿಗದಿಯಾಗಿತ್ತು. ಹೀಗಾಗಿ ಸಭೆ ಮಾಡಿದ್ದೇವೆ. ಸಮಾಜ ರೊಚ್ಚಿಗೆದ್ದು ಬೀದಿಗೆ ಇಳಿದಿದೆ. ಸಮಾಜ ಅನ್ಯತಾ ಭಾವಿಸಬಾರದು ಅಂತ ಸಭೆ ಮಾಡಿದ್ದೇವೆ. ನನಗೆ ವಿಶ್ವಾಸ ಇದೆ. ನಮ್ಮ ಸರ್ಕಾರದಲ್ಲಿ 2A ಮೀಸಲಾತಿ ಬೇಡಿಕೆ ಈಡೇರಿಕೆ ಆಗೋ ಭರವಸೆ ಇದೆ ಎಂದರು. ಇದನ್ನೂ ಓದಿ: ಧರ್ಮಸ್ಥಳಕ್ಕೆ ಬೇಕಾದ್ರೆ ಬನ್ನಿ, ನಾನು ಮುಡಾ ದಾಖಲಾತಿ ತಂದಿಲ್ಲ: ಬೈರತಿ ಸುರೇಶ್
2A ಮೀಸಲಾತಿ ಕೊಟ್ರೆ 1 ಕೆಜಿ ಚಿನ್ನ ಕೊಡುವ ಆಫರ್ ಕೊಟ್ಟಿರೋ ನಿರಾಣಿ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಸಚಿವರು, ನಿರಾಣಿ ಅವರು ಒಂದು ಕೆಜಿ ಚಿನ್ನ ಕೊಟ್ರೆ ತೆಗೆದುಕೊಳ್ಳೋಣ. ಒಂದು ಕೆಜಿ ಅಲ್ಲ. ಇನ್ನು ಜಾಸ್ತಿ ತೆಗೆದುಕೊಳ್ಳೋಣ. ಅಣ್ಣ-ತಂಗಿಗೆ ಕೊಡೋದ್ರಲ್ಲಿ ಏನು ತಪ್ಪಿಲ್ಲ. ಅವರ ಕೊಡಲಿ ನಾವು ತೆಗೆದುಕೊಳ್ಳೋಣ. ನಾವು ನಿರಾಣಿ ತರಹ 2D, 3D ಸಿಡಿ ಅಂತ ನಾನು ಮಾತಾಡೊಲ್ಲ. ಹಿಂದೆಯೂ ಹೋರಾಟದಲ್ಲಿ ಇದ್ದೇನೆ. ಈಗಲೂ ಹೋರಾಟದಲ್ಲಿ ಇದ್ದೇನೆ. ಸಿಎಂ, ಡಿಸಿಎಂ ಅವರು ಕೂಡಾ ಸಂಪೂರ್ಣ ವರದಿ ಬಂದ ಮೇಲೆ ತೀರ್ಮಾನ ಮಾಡೋದಾಗಿ ಹೇಳಿದ್ದಾರೆ ಅಂತ ತಿಳಿಸಿದರು. ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ, ಶಾಸಕ ಯತ್ನಾಳ್, ಸಂಸದ ಈರಣ್ಣ ಕಡಾಡಿ ಸೇರಿ ಸಮಾಜದ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರಕ್ಕೆ ನಾನೇ ಪ್ರಮುಖ ಟಾರ್ಗೆಟ್ – ಹೆಚ್‌ಡಿ ಕುಮಾರಸ್ವಾಮಿ