Connect with us

ಸಚಿವ ಕಾಗೋಡು ತಿಮ್ಮಪ್ಪ ಕ್ಷೇತ್ರದ ಮೇಲೆ ಜಯಮಾಲಾ ಕಣ್ಣು?

ಸಚಿವ ಕಾಗೋಡು ತಿಮ್ಮಪ್ಪ ಕ್ಷೇತ್ರದ ಮೇಲೆ ಜಯಮಾಲಾ ಕಣ್ಣು?

ಬೆಂಗಳೂರು: ಹಿರಿಯ ಸಚಿವ ಕಾಗೋಡು ತಿಮ್ಮಪ್ಪ ಅವರ ವಿಧಾನಸಭಾ ಕ್ಷೇತ್ರದ ಮೇಲೆ ನಟಿ, ಪರಿಷತ್ ಸದಸ್ಯೆ ಜಯಮಾಲಾ ಕಣ್ಣಿಟ್ಟಿದ್ದಾರೆ ಅಂತಾ ಹೇಳಲಾಗುತ್ತಿದೆ. ಒಂದು ವೇಳೆ ಈ ಬಾರಿ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಸ್ಪರ್ಧಿಸದೇ ಇದ್ದರೆ ಸಾಗರ ಕ್ಷೇತ್ರದ ಟಿಕೆಟ್ ತಮಗೆ ನೀಡಬೇಕೆಂದು ಹೈಕಮಾಂಡ್ ಮುಂದೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಚಿವ ಕಾಗೋಡು ತಿಮ್ಮಪ್ಪ ಬದಲಾಗಿ ಅವರ ಪುತ್ರಿಗೆ ಸಾಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗುತ್ತಿದೆ ಎಂಬ ವದಂತಿಗಳು ಕಾಂಗ್ರೆಸ್ ಅಂಗಳದಲ್ಲಿ ಹರಿದಾಡುತ್ತಿವೆ. ಈ ವದಂತಿ ನಡುವೆ ಜಯಮಾಲಾ ಸಾಗರ ಅಖಾಡಕ್ಕೆ ಎಂಟ್ರಿ ನೀಡಿದ್ದಾರೆ.

ಈ ಕಾರಣಕ್ಕೆ ಟಿಕೆಟ್ ಕೊಡಿ: ಸಾಗರದಲ್ಲಿ ಈಡಿಗ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಯಮಾಲಾ ತಾವು ಈಡಿಗ ಸಮುದಾಯದವರಾಗಿದ್ದರಿಂದ ಪ್ರಬಲ ಅಭ್ಯರ್ಥಿಯಾಗುವ ಲಕ್ಷಣಗಳಿವೆ. ಸಾಗರದ ಚುನಾವಣೆಯಲ್ಲಿ ಹವ್ಯಕ ಸಮುದಾಯದ ಜನರ ಮತಗಳು ಕೂಡ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತವೆ. ಜಯಮಾಲಾ ಪತಿ ರಾಮಚಂದ್ರ ಹವ್ಯಕ ಸಮುದಾಯಕ್ಕೆ ಸೇರಿದ ಸಾಗರದ ಮೂಲದವರಾಗಿದ್ದಾರೆ. ಈ ಎಲ್ಲ ಕಾರಣಗಳು ನನ್ನ ಗೆಲುವಿಗೆ ಪೂರಕವಾಗಲಿವೆ ಎಂಬುದನ್ನು ಜಯಮಾಲಾ ಹೈಕಮಾಂಡ್ ಗೆ ತಿಳಿಸಿದ್ದಾರೆ ಅಂತಾ ಹೇಳಲಾಗುತ್ತಿದೆ.

ಕಾಂಗ್ರೆಸ್ ಮಾತ್ರ ಇದೂವರೆಗೂ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿಕೊಂಡಿಲ್ಲ. ಎಲ್ಲ ರಾಜಕೀಯ ಮುಖಂಡರು ತಮ್ಮ ಕ್ಷೇತ್ರಗಳ ಟಿಕೆಟ್‍ಗಾಗಿ ಹೈಕಮಾಂಡ್ ಬಾಗಿಲು ತಟ್ಟುತ್ತಿದ್ದಾರೆ.

ಸಾಗರ ಟಿಕೆಟ್‍ಗಾಗಿ ಬಿಜೆಪಿಯಲ್ಲೂ ಪೈಪೋಟಿ: 2013ರ ವಿಧಾನಸಭಾ ಚುನಾವಣೆಯಲ್ಲಿ ಮಧು ಬಂಗಾರಪ್ಪ, ಬಿಜೆಪಿಯ ಹರತಾಳು ಹಾಲಪ್ಪರನ್ನು ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಿ ವಿಜಯಪತಾಕೆಯನ್ನು ಹಾರಿಸಿದ್ದರು. ಆದ್ರೆ ಈ ಬಾರಿ ಹರತಾಳು ಹಾಲಪ್ಪ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಈಗಾಗಲೇ ರಾಜ್ಯ ನಾಯಕರ ಮುಂದೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಸಾಗರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಬೇಳೂರು ಗೋಪಾಲಕೃಷ್ಣ ಕೂಡ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‍ನ ಕಾಗೋಡು ತಿಮ್ಮಪ್ಪ ಅವರನ್ನು 2004 ಮತ್ತು 2008ರ ವಿಧಾನಸಭಾ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಸೋಲಿಸಿ ಶಾಸಕರಾಗಿದ್ದರು. ಹೀಗಾಗಿ ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ತಮಗೆ ಸಾಗರ ಕ್ಷೇತ್ರದಿಂದಲೇ ಟಿಕೆಟ್ ಬೇಕೆಂದು ಹಠ ಹಿಡಿದರೆ ಒಳ್ಳೆಯ ಸ್ನೇಹಿತರಾಗಿರುವ ಹಾಲಪ್ಪ ಮತ್ತು ಗೋಪಾಲಕೃಷ್ಣ ಮಧ್ಯೆ ಪೈಪೋಟಿ ನಡೆಯುವ ಸಾಧ್ಯತೆಗಳಿವೆ.

ಬಿಜೆಪಿ ಹೈಕಮಾಂಡ್ ಮಾತ್ರ ಅಭ್ಯರ್ಥಿಗಳ ಪಟ್ಟಿಯನ್ನು ಎಚ್ಚರಿಕೆಯಿಂದ ತಯಾರಿಸುತ್ತದೆ. ಟಿಕೆಟ್ ಯಾವ ನಾಯಕರಿಗೆ ಯಾವ ಕ್ಷೇತ್ರದಿಂದ ಲಭಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Advertisement
Advertisement