Connect with us

Bengaluru City

ನಿಮಗೆ ಗೊತ್ತಿಲ್ಲದ ಅಂಬಿ ರಹಸ್ಯ ಬಿಚ್ಚಿಟ್ಟ ಸಚಿವೆ ಜಯಮಾಲಾ

Published

on

ಬೆಂಗಳೂರು: ಇಂದು ನಟ, ರಾಜಕಾರಣಿ ಅಂಬರೀಶ್ ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದ್ರೆ ಅಂಬರೀಶ್ ಜೊತೆಗಿನ ನೆನಪುಗಳು ಅಭಿಮಾನಿಗಳನ್ನು ಕಾಡುತ್ತಿವೆ. ಸಚಿವೆ ಜಯಮಾಲಾ ಅವರು ಅಂಬರೀಶ್ ಜೊತೆಗಿನ ತಮ್ಮ ಸ್ನೇಹದ ದಿನಗಳನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.

ಅಂಬರೀಶ್ ಅವಾಜ್: ಒಂದು ಸಾರಿ ನಾನು ಅಂಬರೀಶ್ ಜೊತೆ ಮಂಡ್ಯಗೆ ಹೋದಾಗ ಅಭಿಮಾನಿಗಳು ನನ್ನನ್ನು ಕಾರಿನಿಂದ ವೇದಿಕೆವರೆಗೂ ಎತ್ತಿಕೊಂಡು ಹೋದರು. ಈ ವೇಳೆ ಏ, ನನ್ನ ಮರ್ಯಾದೆ ತೆಗ್ತೀರಾ? ವಾಪಾಸ್ಸು ಕರೆದುಕೊಂಡು ಬರ್ರೋ ಅಂತಾ ಒಂದೇ ಒಂದು ಅವಾಜ್ ಹಾಕಿದರು. ಅಂಬರೀಶ್ ಅವರಿಗೆ ಹೆದರಿದ ಯುವಕರು ಹಾಗೆ ನನ್ನನ್ನು ಅವರ ಪಕ್ಕ ತಂದು ನಿಲ್ಲಿಸಿದರು. ಇಂದಿಗೂ ನಾನು ಮಂಡ್ಯ ಹೋದರೆ ಆ ಘಟನೆ ನೆನಪಾಗುತ್ತದೆ. ನನ್ನನ್ನು ತಂದು ನಿಲ್ಲಿಸಿದಾಗ ಎಲ್ಲರಿಗೂ ತಮ್ಮ ಪ್ರೀತಿಯಿಂದ ಬೈದರು ಎಂದು ಜಯಮಾಲಾ ಹಳೆಯದನ್ನು ನೆನಪು ಮಾಡಿಕೊಂಡರು.

ಅಂಬರೀಶ್ ತುಂಬಾನೇ ಪುಕ್ಕಲರು. ಅವರು ನಿಂತ ಸ್ಥಳದಲ್ಲಿ ಹಾವು ಅಥವಾ ಚೇಳು ತಂದರೆ ಅಲ್ಲಿ ಒಂದು ಕ್ಷಣ ಸಹ ನಿಲ್ಲಲ್ಲ. ಚಿತ್ರೀಕರಣದಲ್ಲಿ ಹುಲಿ ಮತ್ತು ಆನೆ ತಂದರು ಹೆದರಿಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ಇಂಜೆಕ್ಷನ್ ಮಾಡಿಸಿಕೊಳ್ಳಲು ಅಂತಾ ಅಂಬರೀಶ್ ಆಸ್ಪತ್ರೆಯಿಂದ ಹೊರ ಬಂದಿದ್ದನ್ನು ನಾವು ನೋಡಿದ್ದೇವೆ. ಇಂಜೆಕ್ಷನ್ ಅಥವಾ ಒಂದು ಸಣ್ಣ ಗಾಯವಾದರೂ ಮಕ್ಕಳ ರೀತಿಯಲ್ಲಿ ಹೆದರಿಕೊಳ್ಳುತ್ತಿದ್ದರು ಎಂದು ಹೇಳಿ ಜಯಮಾಲಾ ನಕ್ಕರು.

ನಗುವನ್ನು ಹಂಚುವ ವ್ಯಕ್ತಿ: ಅಂಬರೀಶ್ ಇದ್ದಲ್ಲಿ ನಗೆ ಇರುತ್ತೆ. ಅಂಬರೀಶ್ ಇದ್ದರೆ ಇಡೀ ಸೆಟ್ ನಗುವಂತೆ ಮಾಡುತ್ತಿದ್ದರು. ಸೆಟ್ ನಲ್ಲಿ ಅಂಬರೀಶ್ ಸುಮ್ಮನೆ ಕುಳಿತ್ರೆ ಟೀ ಕೊಡುವ ಹುಡುಗ ಸಹ ಯಾಕಣ್ಣ ಹೀಗಿದ್ದೀಯಾ ಎಂದು ಕೇಳುವಷ್ಟು ಎಲ್ಲರೊಂದಿಗೂ ಆತ್ಮೀಯವಾಗಿ ಇರುತ್ತಿದ್ದರು. ಅಂಬರೀಶ್ ಸೆನ್ಸ್ ಆಫ್ ಹ್ಯೂಮರ್ ಇದ್ದರೂ, ಅವರಿಗೆ ಎಲ್ಲರಿಗೂ ನಗುವನ್ನು ಹಂಚುವ ವ್ಯಕ್ತಿಯಾಗಿದ್ದರು ಎಂದು ಹೇಳುತ್ತಾ ಜಯಮಾಲಾ ಒಂದು ಕ್ಷಣ ಭಾವುಕರಾದರು.

ಸುಮಲತಾ ಗರ್ಭಿಣಿಯಾಗಿದ್ದಾಗ ಅಂಬರೀಶ್ ಪತ್ನಿಯ ಹೊಟ್ಟೆಯನ್ನು ಮುಟ್ಟಿ ಮಗುವಿನ ಚಲನವಲನವನ್ನ ಫೀಲ್ ಮಾಡುತ್ತಿದ್ದರು. ಅಷ್ಟು ಸೀರಿಯಸ್ ಆಗಿದ್ದ ವ್ಯಕ್ತಿಯನ್ನು ಆ ಮಗು ಭಾವನಾತ್ಮಕವಾಗಿ ಬದಲಾವಣೆ ಮಾಡಿತ್ತು. ಶೂಟಿಂಗ್ ಬಿಡುವಿನ ವೇಳೆ ಆ ಎಲ್ಲ ಮಾತುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು.

ದೇವರು ಕೊಟ್ಟ ವ್ಯಕ್ತಿ ಅಂಬಿ: ಚುನಾವಣೆಯಲ್ಲಿ ನಾನು ಅಂಬರೀಶ್ ಅವರ ಜೊತೆ ಪ್ರಚಾರಕ್ಕೆ ಹೋದಾಗ, ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಮ್ಮು ಜಾಸ್ತಿಯಾಗಿತ್ತು. ಜನರಿಗೆ ನಮಗೆ ವೋಟ್ ಹಾಕಿ ಅಂತ ಅಂಬರೀಶ್ ಕೇಳುತ್ತಿದ್ದರೆ, ನಿಮಗೆ ಆರೋಗ್ಯ ಸರಿ ಇಲ್ಲ. ಹೊರಗಡೆ ಬಂದಿದ್ದು ಯಾಕೆ? ನಾವೇ ನಿಮಗೆ ವೋಟ್ ಹಾಕೋದು. ಮನೆಗೆ ಹೋಗಿ ರೆಸ್ಟ್ ಮಾಡಿ ಅಂತಾ ಬೈದು ಕಳುಹಿಸುತ್ತಿದ್ದರು. ಜನರು ಮಾತು ಕೇಳಿದಾಗ ದೇವರು ಕೊಟ್ಟು ಹುಟ್ಟಿರುವ ವ್ಯಕ್ತಿ ಅಂಬರೀಶ್ ಅಂತಾ ನನಗೆ ಗೊತ್ತಾಯಿತು. ನಿನಗೆ ನಾನು ವೋಟ್ ಹಾಕ್ತೀನಿ, ಕೇಳೋದಕ್ಕೆ ಬರಬೇಡ. ಈ ಎಲ್ಲ ಮಾತುಗಳನ್ನು ಕೇಳಿದರೆ ಅಂಬರೀಶ್ ಜನರ ಪ್ರೀತಿಯನ್ನು ಸಂಪತ್ತನ್ನಾಗಿ ಮಾಡಿಕೊಂಡಿದ್ದರು ಎಂಬುವುದು ಎಲ್ಲರಿಗೂ ಅರ್ಥವಾಗುತ್ತಿತ್ತು ಎಂದು ಹೇಳುತ್ತಾ ಜಯಮಾಲಾ ಕಣ್ಣಂಚಲಿ ನೀರು ಬಂತು.

https://www.youtube.com/watch?v=vpV25SEDROE

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *