– 1,526 ಎಕರೆ ಜಾಗದ ಆಸ್ತಿ ಪತ್ರ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ
ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ (Jayalalithaa) ಅವರ ಚಿನ್ನದ ಡಾಬು, ಬಂಗಾರದ ಕಿರೀಟ, ಖಡ್ಗ ಸೇರಿದಂತೆ ಆಸ್ತಿ ಪತ್ರಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಸಿಸಿಎಚ್ ಕೋರ್ಟ್ (CCH Court) ಹಾಲ್-34ರಲ್ಲಿ ನಡೆಯಿತು.
Advertisement
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆಲವು ವಸ್ತುಗಳನ್ನು ವಿಶೇಷ ನ್ಯಾಯಾಲಯವು ವಶಪಡಿಸಿಕೊಂಡಿತ್ತು. ವಶಪಡಿಸಿಕೊಂಡ ವಸ್ತುಗಳು, ಬಟ್ಟೆಗಳು ಹಾಗೂ ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ ನೀಡುವಂತೆ ಕೋರ್ಟ್ ಆದೇಶ ಹೊರಡಿಸಿತ್ತು. ಅದರಂತೆ ಜಯಲಲಿತಾ ಅವರಿಗೆ ಸಂಬಂಧಿಸಿದ ಆಸ್ತಿ ಪತ್ರಗಳು, 11,344 ರೇಷ್ಮೆ ಸೀರೆಗಳು, 7,040 ಗ್ರಾಂ (7.04 ಕೆಜಿ) ತೂಕದ 468 ಬಗೆಯ ಚಿನ್ನಾಭರಣ, ವಜ್ರಖಚಿತ ಆಭರಣಗಳು ಹಾಗೂ 750 ಜೊತೆ ಚಪ್ಪಲಿಗಳು, ವಾಚ್‌ಗಳು ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ (Tamil Nadu Government) ಹಸ್ತಾಂತರಿಸುವ ಪ್ರಕ್ರಿಯೆ ನಡೆಯಿತು.
Advertisement
Advertisement
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್‌ಪಿಪಿ ಕಿರಣ್ ಜವಳಿ, ತಮಿಳುನಾಡು ಸರ್ಕಾರಕ್ಕೆ ಚಿನ್ನಾಭರಣ ಮರಳಿ ಕೊಡಲು ಆದೇಶ ಆಗಿದೆ. ತಮಿಳುನಾಡು ವಿಜಿಲೆನ್ಸ್ ಅಧಿಕಾರಿಗಳು ಬಂದಿದ್ದರು. ಅವರ ಸಮಕ್ಷಮದಲ್ಲಿ ಎಲ್ಲ ಆಸ್ತಿಗಳನ್ನ ಪರಿಶೀಲನೆ ಮಾಡಲಾಗಿದೆ. ಒಟ್ಟು 27 ಕೆಜೆಯಷ್ಟು ವಸ್ತುಗಳನ್ನ ಹಸ್ತಾಂತರಿಸಲಾಗಿದೆ. ಸೀಜ್ ಮಾಡಿದ್ದ ಬಸ್ ಹಾಗೂ 1,526 ಎಕರೆ ಜಾಗ ಕೂಡ ತಮಿಳುನಾಡು ಸರ್ಕಾರಕ್ಕೆ ಕೊಡಲಾಗಿದೆ. ತಂಜಾವೂರು ಸೇರಿದಂತೆ ಬೇರೆ ಬೇರೆ ಕಡೆ ಇದೇ ಜಮೀನು ಇದ್ದು, ಒಟ್ಟು 1,606 ಐಟಮ್‌ಗಳನ್ನು ಕೊಡಲಾಗಿದೆ. ಸೊಂಟದ ಡಾಬು, ಒಂದು ಕೆಜಿಯ ಚಿನ್ನದ ಕಿರೀಟ, ಖಡ್ಗ, ಗೋಲ್ಡ್ ವಾಚ್, ಪೆನ್‌ಗಳಿದ್ದು ಇವುಗಳನ್ನ ಉಡುಗೊರೆಯಾಗಿ ನೀಡಿರಬಹುದು ಎನ್ನಲಾಗಿದೆ. ಸೀರೆಗಳನ್ನ ಈಗಾಗಲೇ ಹಸ್ತಾಂತರಿಸಲಾಗಿದೆ ಎಂದು ಸಹ ಅವರು ತಿಳಿಸಿದ್ದಾರೆ.
Advertisement
ಅಲ್ಲದೇ ಕರ್ನಾಟಕ ಸರ್ಕಾರಕ್ಕೆ ಒಟ್ಟು 16 ಕೋಟಿ ರೂ. ನೀಡಲು ಕೋರ್ಟ್ ಆದೇಶ ಮಾಡಿದೆ. ಎಐಡಿಎಂಕೆ ಮಾಜಿ ನಾಯಕಿ ಶಶಿಕಲಾ 20 ಕೋಟಿ ಹಣ ಕಟ್ಟಿದ್ದ ಕಾರಣ ಅವರಿಂದ 8 ಕೋಟಿ ಸೇರಿ ಒಟ್ಟು 13 ಕೋಟಿ ರೂ.ಗಳನ್ನ ಕರ್ನಾಟಕ ಸರ್ಕಾರಕ್ಕೆ ಕೊಡಲು ಕೋರ್ಟ್ ಹೇಳಿದೆ.
ಶುಕ್ರವಾರ ವಕೀಲರು ಹಾಗೂ ತಮಿಳುನಾಡಿನ ಕೆಲ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಪ್ರತಿಯೊಂದು ಮಾಹಿತಿಯನ್ನು ನೀಡಿ ಚಿನ್ನದ ಒಡವೆಗಳನ್ನು ತೂಕ ಹಾಕಿ ಬಿಗಿ ಭದ್ರತೆಯಲ್ಲಿ ಕೊಂಡೊಯ್ಯಲಾಯ್ತು. 7,040 ಗ್ರಾಂ ತೂಕದ 468 ಬಗೆಯ ಚಿನ್ನ, ವಜ್ರಾಭರಣಗಳು, 700 ಕೆ.ಜಿ ತೂಕದ ಬೆಳ್ಳಿ ಆಭರಣಗಳು, 11,344 ರೇಷ್ಮೆ ಸೀರೆಗಳು, 740 ದುಬಾರಿ ಚಪ್ಪಲಿಗಳು, 250 ಶಾಲು, 12 ರೆಫ್ರಿಜರೇಟರ್, 10 ಟಿವಿ ಸೆಟ್, 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್ ಹಾಗೂ 1,040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್‌ಗಳು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾಯಿತು.